ಬೆಂಗಳೂರು: ಹಿಂದೂ ಜನ ಜಾಗೃತಿ ಸಮಿತಿ ದೂರಿನ ನಂತರ ಕಾಮಿಡಿಯನ್‌ ವೀರ್‌ ದಾಸ್‌ ರ ಕಾರ್ಯಕ್ರಮ ರದ್ದು

Update: 2022-11-10 12:32 GMT

ಬೆಂಗಳೂರು: ಇಂದು ಬೆಂಗಳೂರಿನಲ್ಲಿ ನಡೆಯಲಿದ್ದ ಸ್ಟ್ಯಾಂಡ್-ಅಪ್‌ ಕಾಮಿಡಿಯನ್‌ ವೀರ್‌ ದಾಸ್‌ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಈ ಕುರಿತ ಮಾಹಿತಿಯನ್ನು ಸ್ವತಃ ವೀರ್‌ ದಾಸ್‌ ಅವರೇ ಇನ್‌ಸ್ಟಾಗ್ರಾಂ ಪೋಸ್ಟ್‌ ಮೂಲಕ ನೀಡಿದ್ದಾರೆ. ವೀರ್‌ ದಾಸ್‌ ಅವರ  ಕಾಮಿಡಿ ಶೋ ʻʻಹಿಂದೂಗಳ ಭಾವನೆಯನ್ನು ನೋಯಿಸುತ್ತದೆ ಮತ್ತು ಭಾರತವನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸುತ್ತದೆ,ʼʼ ಎಂದು ಆರೋಪಿಸಿ ಹಿಂದೂ ಜನ ಜಾಗೃತಿ ಸಮಿತಿ ವ್ಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ.

ʻʻಅನಿವಾರ್ಯ ಸನ್ನಿವೇಶಗಳಿಂದಾಗಿ ನಮ್ಮ ಬೆಂಗಳೂರು ಕಾರ್ಯಕ್ರಮವನ್ನು ಮುಂದೂಡುತ್ತಿದ್ದೇವೆ. ಹೊಸ ವಿವರಗಳು ಮತ್ತು ದಿನಾಂಕಗಳು ಶೀಘ್ರದಲ್ಲಿಯೇ,ʼʼ ಎಂದು ಬರೆದ ವೀರ್‌ ದಾಸ್‌ ತಮ್ಮ ಅಭಿಮಾನಿಗಳಿಗುಂಟಾದ ನಿರಾಸೆಗೆ ಕ್ಷಮೆಯಾಚಿಸಿದ್ದಾರೆ.

ವೀರ್‌ ದಾಸ್‌ ಅವರು ಇಂದು ಮಲ್ಲೇಶ್ವರಂನಲ್ಲಿರುವ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ  ತಮ್ಮ ಶೋ ನಡೆಸಲಿದ್ದರು.

"ಈ ಹಿಂದೆ ಅವರು ಮಹಿಳೆಯರ ವಿರುದ್ಧ, ನಮ್ಮ ಪ್ರಧಾನಿ  ಮತ್ತು ಭಾರತದ ವಿರುದ್ಧ ಅಮೆರಿಕಾದ ಜಾನ್‌ ಎಫ್‌ ಕೆನ್ನಡಿ ಸೆಂಟರ್‌ನಲ್ಲಿ ನಿಂದನಾತ್ಮಕ ಹೇಳಿಕೆ ನೀಡಿ ದೇಶವನ್ನು ಗೌಣವಾಗಿಸಿದ್ದರು. ʻನಾವು ಭಾರತದಲ್ಲಿ ಮಹಿಳೆಯರನ್ನು ಹಗಲು ಹೊತ್ತಿನಲ್ಲಿ ಆರಾಧಿಸಿ ರಾತ್ರಿ ಹೊತ್ತು ಅತ್ಯಾಚಾರಗೈಯ್ಯುತ್ತೇವೆ,ʼ ಎಂದು ಅವರು ತಮ್ಮ ಶೋ ದಲ್ಲಿ ಹೇಳಿದ್ದರು,ʼʼ ಎಂದು  ಹಿಂದು ಜನ ಜಾಗೃತಿ ಸಮಿತಿ ರಾಜ್ಯ ವಕ್ತಾರ  ಮೋಹನ್‌ ಗೌಡ ಹೇಳಿದ್ದಾರೆ.

ಬೆಂಗಳೂರಿನಂತಹ ಮತೀಯ ಸೂಕ್ಷ್ಮ ಪ್ರದೇಶದಲ್ಲಿ ಅವರ ಕಾಯಕ್ರಮ ನಡೆಸಲು ಅನುಮತಿಸುವುದು ಸರಿಯಲ್ಲ, ರಾಜ್ಯ ಈಗಾಗಲೇ ಹಲವು ಇತರ ಕಾರಣಗಳಿಗಾಗಿ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಿಸುತ್ತಿರುವಾಗ ಇಂತಹ ಕಾರ್ಯಕ್ರಮಗಳು ಪರಿಸ್ಥಿತಿಯನ್ನು ಬಿಗಡಾಯಿಸಬಹುದು ಹಾಗೂ ಕಾರ್ಯಕ್ರಮವನ್ನು ತಕ್ಷಣ ರದ್ದುಗೊಳಿಸಬೇಕು,ʼʼ ಎಂದು ಸಮಿತಿ ತನ್ನ ದೂರಿನಲ್ಲಿ ಹೇಳಿತ್ತು.

Similar News