ಆದಿಚುಂಚನಗಿರಿ ಶ್ರೀಗಳ ಹೆಗಲ ಮೇಲೆ ಕೈ ಹಾಕಿದ ಸಚಿವ ಅಶೋಕ್: ಫೋಟೋ ವೈರಲ್, ಸಾಮಾಜಿಕ ಜಾಲತಾಣದಲ್ಲಿ ಟೀಕೆ

Update: 2022-11-11 14:17 GMT

ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಕಂದಾಯ ಸಚಿವ ಆರ್. ಅಶೋಕ್ (R. Ashoka) ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಚಿವರ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ.

ಇಂದು (ಶುಕ್ರವಾರ) ಮಧ್ಯಾಹ್ನ 12 ಗಂಟೆಗೆ ಪ್ರಧಾನಮಂತ್ರಿ ಮೋದಿ ಅವರು, ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ 'ಪ್ರಗತಿ ಪ್ರತಿಮೆ' ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಬಿ.ಎಸ್ ಯಡಿಯೂರಪ್ಪ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸೇರಿದಂತೆ ಸಂಪುಟ ಸಚಿವರು ಎಲ್ಲರೂ ಫೋಟೋ ತೆಗೆಸಿಕೊಂಡಿದ್ದಾರೆ. ಈ ವೇಳೆ ‌ಸಚಿವ ಆರ್‌ ಅಶೋಕ್ ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿಯ ಎರಡು ಭುಜದ ಮೇಲೆ ಕೈಯಿಟ್ಟು ಫೋಟೋ ತೆಗೆಯಿಸಿಕೊಂಡಿದ್ದು, ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಟ್ವಿಟರ್ ನಲ್ಲಿ ಈ ಫೋಟೋವನ್ನು ಹಂಚಿಕೊಂಡಿರುವ ಕಾಂಗ್ರೆಸ್,  ''ಸ್ವಾಮಿಜಿಗಳಿಗೆ ಅವರದ್ದೇ ಆದ ಗೌರವವಿರುತ್ತದೆ. ಘನತೆ ಇರುತ್ತದೆ. ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು ಸಚಿವ ಆರ್. ಅಶೋಕ್ ಅವರಿಗೆ ಸದರ ಎನಿಸಿದ್ದಾರೆಯೇ? ಇದೇ ರೀತಿ ಮೋದಿ ಹೆಗಲಿಗೆ ಕೈ ಹಾಕುವ ಧೈರ್ಯವಿದೆಯೇ? ಧರ್ಮ, ಸಂಸ್ಕೃತಿಯ ಬಗ್ಗೆ ಮಾತಾಡುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ''ಎಂದು ಕಿಡಿಕಾರಿದೆ. 

''ನೆನಪಿರಲಿ ಅವರು ಪೂಜ್ಯ ಸ್ವಾಮಿಗಳು... ನಿಮ್ಮ ಫೋಟೋ ಶೂಟ್ ಗೆ ಅವರ ಹೆಗಲ ಮೇಲೆ ಕೈ ಹಾಕೋದ .. ಆ ಪೀಠಕ್ಕೆ ಅದರದ್ದೇ ಗೌರವ ಇದೇ...ಮರೆಯಬೇಡಿ'' ಎಂದು ನೆಟ್ಟಿಗರೊಬ್ಬರು ಎಚ್ಚರಿಸಿದ್ದಾರೆ. 

''ನಮ್ಮ ಗುರುಗಳು ಇದರ ಸೂಕ್ಷ್ಮತೆಯನ್ನು ಅರಿಯದೇ ಸಮುದಾಯದವರ ಕೆಂಗಣ್ಣಿಗೆ ಗುರುಯಾಗಿರುವಿರಿ ಇದಕ್ಕೆ ಗುರುಗಳು ಸೇರಿ ಸಮುದಾಯದವರಲ್ಲಿ ಕ್ಷಮೆ ಯಾಚಿಸುವುದು ಸೂಕ್ತ'' ಎಂದು ಲೋಕೇಶ್ ಗೌಡ ಮಂಡ್ಯ ಎಂಬುವರು ಆಗ್ರಹಿಸಿದ್ದಾರೆ. 

Full View Full View

Similar News