ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಕನ್ನಡತಿ ಮೇಘನ್‌ ಶ್ರೀನಿವಾಸ್‌ ಜಯಭೇರಿ

Update: 2022-11-11 16:43 GMT

ಬೆಂಗಳೂರು: ನವೆಂಬರ್ 8ರಂದು ಅಮೆರಿಕಾದಲ್ಲಿ ನಡೆದ ಚುನಾವಣೆಯಲ್ಲಿ, ಐಯೋವ ರಾಜ್ಯದ ಅಸೆಂಬ್ಲಿಗೆ (Iowa State House) ಶಾಸಕಿಯಾಗಿ ಯುವ ಕನ್ನಡತಿ ಡಾ. ಮೇಘನ್‌ ಲಕ್ಷ್ಮಿ ಶ್ರೀನಿವಾಸ್‌ ಆಯ್ಕೆಯಾಗಿದ್ದಾರೆ. ಅವರು ಈ ಸ್ಥಾನಕ್ಕೆ ಆಯ್ಕೆಯಾದ ಪ್ರಪ್ರಥಮ ದಕ್ಷಿಣ ಏಷ್ಯಾ ಮೂಲದವರು.

ಡೆಮೊಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಮೇಘನ್,‌ ರಿಪಬ್ಲಿಕನ್‌ ಪಕ್ಷದ ಎದುರಾಳಿಯನ್ನು ದೊಡ್ಡ ಅಂತರದಲ್ಲಿ ಸೋಲಿಸಿದ್ದಾರೆ. ಐಯೋವಾ ವಿಧಾನಸಭೆಗೆ ಶಾಸಕಿಯಾಗಿ ಆಯ್ಕೆಯಾದ ಅತಿ ಚಿಕ್ಕ ವಯಸ್ಸಿನ ಬಿಳಿಯ ವರ್ಣದವರಲ್ಲದ ವ್ಯಕ್ತಿ ಎಂದು ಅಲ್ಲಿನ ಪತ್ರಿಕೆಗಳು ವರದಿ ಮಾಡಿವೆ. ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಏಷ್ಯನ್‌ ಮೂಲದ ಜನಸಂಖ್ಯೆ ಕೇವಲ 2-3% . ಹಾಗಾಗಿ ಅಲ್ಲಿ, ಯುವ ಕನ್ನಡತಿಯ ಗೆಲುವು ವಿಶೇಷವಾಗಿದೆ. ಲೋವಾ ಹೌಸ್ ಡಿಸ್ಟ್ರಿಕ್ 30ರಿಂದ ಸ್ಪರ್ಧಿಸಿದ ಮೇಘನ್ ಶೇ 63ರಷ್ಟು ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.

ವೃತ್ತಿಯಲ್ಲಿ ವೈದ್ಯೆಯಾಗಿರುವ ಮೇಘನ್‌, ತಮ್ಮ ವೈದ್ಯಕೀಯ ಶಿಕ್ಷಣವನ್ನು ಪ್ರತಿಶ್ಟಿತ ಹಾವರ್ಡ್ ವಿವಿ ಮತ್ತು ಜಾನ್‌ ಹಾಪ್‌ಕಿ‌ನ್ಸ್‌ ಮೆಡಿಕಲ್‌ ಸ್ಕೂಲ್‌ನಿಂದ ಪಡೆದಿದ್ದಾರೆ. ತಮ್ಮ ಪೋಷಕರು ನೆಲೆಸಿರುವ ‌ಐಯೋವಾ ರಾಜ್ಯದ ಡಿ ಮೋಯಿನ್ಸ್ ನಗರದಲ್ಲಿ ‌ ಸಾಮಾಜಿಕ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗ ಚಿಕಿತ್ಸೆ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಪ್ರದೇಶದ ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ, ಮಹಿಳೆಯರ ಆರೋಗ್ಯ ಮತ್ತು ಸಬಲೀಕರಣ ಮತ್ತು ಕುಟುಂಬ ಯೋಜನೆಗೆ ಸಂಬಂಧಿಸಿದ ವಿಷಯಗಳಲ್ಲಿ ಅತೀವ ಆಸಕ್ತಿ ಹೊಂದಿರುವ ಮೇಘನ್, ಆ ನಿಟ್ಟಿನಲ್ಲಿ ಕೆಲಸ ಮಾಡುವ ಹುರುಪಿನಲ್ಲಿದ್ದಾರೆ. ಈ ವಿಷಯಗಳಿಗೆ ಹೆಚ್ಚಿನ ಒತ್ತುಕೊಟ್ಟು ಪ್ರಚಾರವನ್ನೂ ಮಾಡಿದ್ದರು.

ಮೇಘನ್‌ ರವರ ತಂದೆ ಡಾ. ಜವರಯ್ಯ ಶ್ರೀನಿವಾಸಪ್ಪ ಮತ್ತು ತಾಯಿ ಡಾ.ಗೀತಾ ಅವರು ಕುಣಿಗಲ್ ತಾಲ್ಲೂಕಿನ ಕೊಡಗೀಹಳ್ಳಿಯ ರೈತ ಕುಟುಂಬದವರು. ಇಬ್ಬರೂ ಬೆಂಗಳೂರಿನ ಕೃಷಿ ವಿವಿ ಯಲ್ಲಿ ಓದಿದ ಪಶುವೈದ್ಯಕೀಯ ವಿಜ್ಞಾನಿಗಳಾಗಿದ್ದಾರೆ. ಕಳೆದ 40 ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಮಗಳ ಸಾಧನೆಗೆ ಇಬ್ಬರೂ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಮಧ್ಯಂತರ ಚುನಾವಣೆಯಲ್ಲಿ ಮತದಾರರಿಗೆ ಬೆಲೆ ಏರಿಕೆ, ಹಣದುಬ್ಬರ, ಅಕ್ರಮ ವಲಸಿಗರು, ಅಪರಾಧಗಳ ಹೆಚ್ಚಳ ಮುಂತಾದವುಗಳು ಪ್ರಮುಖ ವಿಷಯವಾಗಿದ್ದವು. 

ಈ ಬಾರಿ ಅಮೆರಿಕದ ಸಂಸತ್ ಗೆ ಆಡಳಿತರೂಢ ಡೆಮಾಕ್ರಟಿಕ್‌ ಪಕ್ಷದಿಂದ ದಾಖಲೆ ಸಂಖ್ಯೆಯ ಐವರು ಭಾರತೀಯ ಮೂಲದ ಸಂಸದರೂ ಆಯ್ಕೆಯಾಗಿದ್ದಾರೆ. 

Similar News