ಕಾರ್ಲ್ ಮಾರ್ಕ್ಸ್ ಗಿಂತ ಮೊದಲೇ ವಿಶ್ವಕ್ಕೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ನೀಡಿದವರು ಬಸವಣ್ಣ: ಈಶ್ವರ ಖಂಡ್ರೆ

Update: 2022-11-12 11:43 GMT

ತುಮಕೂರು.ನ.12: 'ಕಾರ್ಲ್ ಮಾಕ್ಸ್ ಅವರಿಗಿಂತ ಮೊದಲೇ 12ನೇ ಶತಮಾನದಲ್ಲಿಯೇ ವರ್ಗ,ವರ್ಣ, ಲಿಂಗಭೇದ ರಹಿತ ಸಮ ಸಮಾಜದ ಕನಸಿನೊಂದಿಗೆ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಿತ್ತಿದವರು ಅಣ್ಣ ಬಸವಣ್ಣ ಅವರು, ವೀರಶೈವ,ಲಿಂಗಾಯಿತರು ಇಂತಹ ಸಮುದಾಯದಲ್ಲಿ ಹುಟ್ಟಿದವರೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ' ಎಂದು ಶಾಸಕ ಹಾಗೂ ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಸಿದ್ಧಗಂಗಾ ಮಠದ ವಸ್ತುಪ್ರದರ್ಶನದ ಆವರಣದಲ್ಲಿ ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾವತಿಯಿಂದ ಆಯೋಜಿಸಿದ್ದ ಬೆಂಗಳೂರು ವಿಭಾಗೀಯ ಮಟ್ಟದ ಮಹಿಳಾ ಮತ್ತು ಯುವ ಕಾರ್ಯಕರ್ತರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಎಲ್ಲಾ ಧರ್ಮ,ಜಾತಿಗಳಿಗೂ ಪ್ರಪಂಚದ ಮೊದಲ ಸಂಸತ್ತು ಎನಿಸಿಕೊಂಡಿರುವ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದವರು ಬಸವೇಶ್ವರರು.ಮೌಡ್ಯದಿಂದ ಸಮಾಜವನ್ನು ಹೊರತರಬೇಕೆಂಬುದು ಅವರ ಕನಸಾಗಿತ್ತು. ಇಂತಹ ಕನಸನ್ನು ನನಸು ಮಾಡಲು ನಾವೆಲ್ಲರೂ ಕಟಿಬದ್ದರಾಗಬೇಕಿದೆ ಎಂದರು.

ಇಂದು ಕರ್ನಾಟಕ ಪ್ರಪಂಚದಲ್ಲಿಯೇ ಹೆಚ್ಚು ಪ್ರಸಿದ್ದಿ ಪಡೆದಿದೆ.ಐಟಿ, ಬಿಟಿಯ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿಯೂ ಗಣನೀಯ ಸಾಧನೆ ಮಾಡಿದೆ. ಈ ಸಾಧನೆಯ ಹಿಂದೆ ವೀರಶೈವ,ಲಿಂಗಾಯಿತ ಮಠಗಳ ಪಾತ್ರ ಮಹತ್ವದಿದೆ.ಇತ್ತೀಚಿನ ದಿನಗಳಲ್ಲಿ ಲಿಂಗಾಯಿತ,ವೀರಶೈವ ಬೇರೆ ಬೇರೆ ಎಂಬ ಪ್ರತಿಪಾದನೆ ಹೆಚ್ಚಾಗಿರುವುದು ಖೇದಕರ ವಿಚಾರವಾಗಿದೆ. ವೀರಶೈವ,ಲಿಂಗಾಯಿತ ಎಂಬುದು ಶರಣ ಸಮಾಜವೆಂಬ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.ನಮ್ಮ ಇಬ್ಬರ ಆಚಾರ,ವಿಚಾರದಲ್ಲಿ ವೆತ್ಯಾಸವಿಲ್ಲ. ಅಂಗೈಯಲ್ಲಿ ಲಿಂಗವಿಟ್ಟು ಪೂಜಿಸುವ ನಾವೆಲ್ಲರೂ ವೀರಶೈವ ಲಿಂಗಾಯಿತರು.ನಮ್ಮಲ್ಲಿ ಭೇಧ, ಭಾವ ಸರಿಯಲ್ಲ. ಇದೇ ಈ ಎರಡು ದಿನಗಳ ಕಾರ್ಯಾಗಾರ ಮತ್ತು ಸಮಾವೇಶದ ಪ್ರಮುಖ ಉದ್ದೇಶ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಉಪಾಧ್ಯಕ್ಷ ವೀರಣ್ಣ ಮಾತನಾಡಿ, ಪ್ರಸ್ತುತ 2.50ಲಕ್ಷದಷ್ಟಿರುವ ಸದಸ್ಯರನ್ನು 10 ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಸದಸ್ಯತ್ವದ ಅರ್ಜಿಗಳ ವಿತರಣೆ ಆರಂಭವಾಗಿದೆ. ಎಲ್ಲರೂ ಸದಸ್ಯತ್ವ ಪಡೆದುಕೊಳ್ಳಬೇಕಿದೆ.ಮಹಾಸಭಾದ 23ನೇ ಅಧಿವೇಶನದ ಮುಂದಿನ ಡಿಸೆಂಬರ್ 24-25 ಮತ್ತು 26 ರಂದು ದಾವಣಗೆರೆಯಲ್ಲಿ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಅಶೀರ್ವಚನ ನೀಡಿ, ವೀರಶೈವ, ಲಿಂಗಾಯಿತ ಸಮುದಾಯದ ಭವಿಷ್ಯದ ಚಿಂತನೆಯೊಂದಿಗೆ ಆರಂಭಗೊಂಡ ಈ ಸಂಸ್ಥೆಗೆ ಒಂದು ಶತಮಾನ ಕಳೆದಿದೆ. ಅರ್ಥಿಕ,ಸಾಮಾಜಿಕ,ಶೈಕ್ಷಣಿಕ,ಕೈಗಾರಿಕಾ ಕ್ಷೇತ್ರ ವೀರಶೈವ, ಲಿಂಗಾಯಿತ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ. ಆದರೂ ಇನ್ನು ಬಲಗೊಳ್ಳುವ ಅಗತ್ಯವಿದೆ.ಹೆಸರಿಗೆ ಮಾತ್ರ ಲಿಂಗಾಯಿತರಾದರೆ ಸಾಲದು,ಆಚರಣೆಯಲ್ಲಿಯೂ ಲಿಂಗಾಯಿತರಾಗ ಬೇಕು. ಸಂಸ್ಕಾರಯುತ ಬದುಕು ನಮ್ಮದಾಗಬೇಕು.ಸ್ವಧರ್ಮ ನಿಷ್ಠೆ,ಪರಧರ್ಮ ಸಹಿಷ್ಠತೆ ನಮ್ಮ ಮಂತ್ರವಾಗಬೇಕು, ಐಕ್ಯತೆ ಮಂತ್ರ ನಮ್ಮದಾಗಬೇಕೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಬೆಂಗಳೂರು ವಿಭಾಗೀಯ ಕಾರ್ಯಕ್ರಮದ ಪ್ರಧಾನ ಕಾರ್ಯದರ್ಶಿ ನಟರಾಜು ಸಾಗರನಹಳ್ಳಿ, ಮಹಿಳೆಯರು ಮತ್ತು ಯುವಕರಿಗೆ ನಮ್ಮ ಸಂಸ್ಕøತಿ, ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಇದರಲ್ಲಿ ಕೃಷಿ, ಕೈಗಾರಿಕೆ, ಸಂಸ್ಕøತಿ, ಪರಂಪರೆಗಳ ಕುರಿತು ಗೋಷ್ಠಿಗಳು ನಡೆಯಲಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹಿರಿಯ ಉಪಾಧ್ಯಕ್ಷ ಡಾ.ಎನ್.ತಿಪ್ಪಣ್ಣ ವಹಿಸಿದ್ದರು.ಕಾರ್ಯಾಗಾರ ಸಮಿತಿಯ ಅಧ್ಯಕ್ಷ ಎಸ್.ಕೆ.ರಾಜಶೇಖರ್,ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ,ಮಹಿಳಾ ಘಟಕದ ರಾಜ್ಯಾಧ್ಯಕ್ಷ ಬಿ.ವೈ.ಅರುಣಾದೇವಿ,ಟಿ.ಬಿ.ಶೇಖರ್,ಎಂ.ಎನ್.ಶಶಿಧರ್, ಗೋವರ್ಧನ್,ಲೋಕೇಶ್ವರ್  ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Similar News