ಶಾಸಕ ಪ್ರಿಯಾಂಕ್‍ ಖರ್ಗೆಗೆ ಜೀವ ಬೆದರಿಕೆ ಇದ್ದರೂ ಭದ್ರತೆ ನೀಡದ ಸರಕಾರ: ಡಾ.ಶರಣಪ್ರಕಾಶ್ ಪಾಟೀಲ್ ಆಕ್ರೋಶ

Update: 2022-11-12 12:44 GMT

ಕಲಬುರಗಿ, ನ. 12: ‘ಬಿಜೆಪಿಯು ತನ್ನ ಸಣ್ಣ-ಪುಟ್ಟ ನಾಯಕರಿಗೂ ಭದ್ರತೆ ನೀಡಿದೆ. ಆದರೆ, ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆಯವರಿಗೆ ಜೀವ ಬೆದರಿಕೆ ಇದ್ದರೂ ಅವರಿಗೆ ಏಕೆ ಭದ್ರತೆ ಕಲ್ಪಿಸಿಲ್ಲ. ಜನಪ್ರತಿನಿಧಿಗೆ ಜೀವ ಬೆದರಿಕೆ ಇದ್ದಾಗ ಭದ್ರತೆ ಒದಗಿಸುವುದು ಸರಕಾರದ ಕರ್ತವ್ಯ’ ಎಂದು ಮಾಜಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಿಗೆ ಬಹಿರಂಗವಾಗಿ ‘ಶೂಟ್ ಮಾಡುತ್ತೇನೆ’ ಎಂದು ಬೆದರಿಕೆವೊಡ್ಡಿದವರ ವಿರುದ್ಧ ಪೊಲೀಸ್ ಇಲಾಖೆ ಏನು ಕ್ರಮ ತೆಗೆದುಕೊಂಡಿದೆ? ಶೂಟ್ ಮಾಡುತ್ತೇವೆಂಬ ಹೇಳಿಕೆ ಬಿಜೆಪಿಯ ನಿಲುವೋ ಅಥವಾ ಸರಕಾರದ ನಿಲುವೋ? ಮಣಿಕಂಠ ರಾಠೋಡ್ ಯಾರು? ಈ ಬಗ್ಗೆ ಸರಕಾರ ಏನು ಕ್ರಮ ತೆಗೆದುಕೊಂಡಿದೆ’ ಎಂದು ಪ್ರಶ್ನೆ ಮಾಡಿದರು.

‘ರಾಜ್ಯ ಬಿಜೆಪಿ ಸರಕಾರದ ಬಿಟ್ ಕಾಯಿನ್ ಹಗರಣ, ಪಿಎಸ್ಸೈ ನೇಮಕಾತಿ ಅಕ್ರಮ, ಗಂಗಾ ಕಲ್ಯಾಣ ಕೊಳವೆಬಾವಿ ಅವ್ಯವಹಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೂ ಧ್ವನಿ ಎತ್ತುತ್ತಿರುವ ಪ್ರಿಯಾಂಕ್ ಖರ್ಗೆ ಅವರನ್ನು ಕೊಲೆ ಮಾಡಲು ಬಿಜೆಪಿ ಸರಕಾರ ಸಂಚು ಮಾಡುತ್ತಿದೆಯೇ? ಎಂದು ಡಾ.ಶರಣ ಪ್ರಕಾಶ್ ಪಾಟೀಲ್ ಸಂಶಯವನ್ನು ವ್ಯಕ್ತಪಡಿಸಿದರು.

‘ಚುನಾಯಿತ ಶಾಸಕ, ಮಾಜಿ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡುವ ಬೆದರಿಕೆಯನ್ನು ಬಿಜೆಪಿ ಸರಕಾರ ತಮ್ಮ ಮುಖಂಡರ ಮೂಲಕ ಹೇಳಿಕೆ ಕೊಡಿಸುತ್ತಿದೆ. ಪೂರ್ವನಿಯೋಜಿತವಾಗಿ ಪ್ರಿಯಾಂಕ್ ಅವರ ಮೇಲೆ ಸೇಡು ತಿರಿಸಿಕೊಳ್ಳಲು ಹೊಂಚು ಹಾಕುತ್ತಿದೆ’ ಎಂದು ದೂರಿದ ಅವರು, ‘ಪ್ರಿಯಾಂಕ್ ಅವರಿಗೆ ಜೀವ ಬೆದರಿಕೆ ಎಚ್ಚರಿಕೆಗಳು ಬಂದಿವೆ. ಪೊಲೀಸ್ ಠಾಣೆಯಲ್ಲಿ ಎರಡು ದೂರು ದಾಖಲಾಗಿದ್ದರೂ, ಸರಕಾರ ಅವರಿಗೆ ಭದ್ರತೆ ಕಲ್ಪಿಸಿಲ್ಲ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ಇದುವರೆಗೂ ದ್ವೇಷದ ರಾಜಕಾರಣ ನಡೆದಿಲ್ಲ. ನಾಳೆ(ನ.13) ಸಿಎಂ ಕಲಬುರಗಿಗೆ ಬರುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಗಲಾಟೆ ಮಾಡಬಹುದು. ಹರಾಜಕತೆ ಸೃಷ್ಟಿ ಮಾಡಲು ನಾವು ಬಿಡುವುದಿಲ್ಲ. ನಾವು ಯಾವುದಕ್ಕೂ ಹೆದರುವುದಿಲ್ಲ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ರಾಜಕೀಯ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಇತಿ ಮಿತಿಯೊಳಗೆ ಕೆಲಸ ಮಾಡಿದ್ದೇವೆ’ ಎಂದು ಅವರು ತಿಳಿಸಿದರು.

Full View

Similar News