ಅತ್ಯಾಚಾರ ಪ್ರಕರಣ: ಸಂತ್ರಸ್ತೆಗೆ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ
ಬೆಂಗಳೂರು, ನ. 13: ಅತ್ಯಾಚಾರಕ್ಕೆ ಒಳಗಾಗಿ 25 ವಾರಗಳ ಗರ್ಭಧರಿಸಿರುವ ಹದಿಮೂರು ವರ್ಷದ ಸಂತ್ರಸ್ತೆಗೆ ಗರ್ಭಪಾತ ಮಾಡಿಸಿಕೊಳ್ಳಲು ಹೈಕೋರ್ಟ್ (high court of karnataka) ಅನುಮತಿ ನೀಡಿ ಆದೇಶಿಸಿದೆ.
ಈ ಸಂಬಂಧ ಸಂತ್ರಸ್ತೆಯು ತಾಯಿಯ ಮೂಲಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಸಂತ್ರಸ್ತೆಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಿತು.
ಅಲ್ಲದೆ, ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ಅಧೀಕ್ಷಕರಿಗೆ ಗರ್ಭಪಾತ ಮಾಡಿಸುವುದಕ್ಕೆ ನಡೆಸಬೇಕಾದ ಪ್ರಕ್ರಿಯೆಯನ್ನು ಕರ್ನಾಟಕ ಸರಕಾರದ ವೆಚ್ಚದಲ್ಲಿ ನಡೆಸಲು ಆದೇಶಿಸಿತು.
ಗರ್ಭಪಾತ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಸಂತ್ರಸ್ತೆಯ ನೆರವಿಗೆ ಇರುವವರು ಆಸ್ಪತ್ರೆಗೆ ಹೋಗಲು ಹಾಗೂ ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ ಅವರನ್ನು ಮನೆಗೆ ಬಿಡಲು ಸಾರಿಗೆ ವ್ಯವಸ್ಥೆ ಮಾಡಬೇಕು. ಜತೆಗೆ ಸಂತ್ರಸ್ತ ಬಾಲಕಿಯ ಪರವಾಗಿ ಯಾವುದೇ ರೀತಿಯಾದ ಹಣವನ್ನು ಪಡೆಯುವಂತಿಲ್ಲ ಎಂದು ನ್ಯಾಯಪೀಠವು ತಿಳಿಸಿದೆ. ಪ್ರತಿವಾದಿಗಳು ಮುಂದಿನ 14 ದಿನಗಳಲ್ಲಿ ಸ್ಥಿತಿಗತಿ ವರದಿ ಸಲ್ಲಿಸಬೇಕೆಂದು ಪೀಠವು ಆದೇಶದಲ್ಲಿ ತಿಳಿಸಿದೆ.