ಓ ಮೆಣಸೇ...

Update: 2022-11-13 19:30 GMT

ರೈತರು ಯಾವ ಪಕ್ಷಕ್ಕೂ ಸೇರಿದವರಲ್ಲ - ಬಸವರಾಜ ಬೊಮ್ಮಾಯಿ, ಸಿಎಂ
ರೈತರು ಯಾವ ಪಕ್ಷಕ್ಕೂ ಬೇಕಾಗಿಲ್ಲ ಎನ್ನುವುದು ಹೆಚ್ಚು ಸರಿ.

ಈ.ಡಿ. ಪದೇ ಪದೇ ನನಗೆ ನೋಟಿಸ್ ನೀಡಿ ಹಿಂಸೆ ನೀಡುತ್ತಿದೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ದುಡ್ಡು ಮಾಡಬೇಕು, ಆದರೆ ಈ.ಡಿ. ನೋಟಿಸ್ ಬೇಡ ಎಂದರೆ ಆಗುತ್ತದೆಯೇ?

ನ್ಯಾಯಮೂರ್ತಿಗಳ ನೇಮಕಕ್ಕೆ ಇರುವ ಕೊಲಿಜಿಯಂ ವ್ಯವಸ್ಥೆ ಅಪಾರದರ್ಶಕ - ಕಿರಣ್ ರಿಜಿಜು, ಕೇಂದ್ರ ಸಚಿವ
ವ್ಯವಸ್ಥೆಯನ್ನು ಅವ್ಯವಸ್ಥೆಗೊಳಿಸುವುದು ನಿಮಗೆ ಕಲಿಸಬೇಕಾಗಿಲ್ಲ.

ಭಾರತೀಯ ಪರಂಪರೆ ಬಗ್ಗೆ ಗೌರವ ಇಲ್ಲದವರು ಭಗವದ್ಗೀತೆಯನ್ನು ವಿರೋಧಿಸುತ್ತಿದ್ದಾರೆ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಸಂವಿಧಾನವನ್ನು ವಿರೋಧಿಸುವವರ ಬಗ್ಗೆ ನಿಮ್ಮ ನಿಲುವೇನು?

ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ನಮ್ಮ ಬೆನ್ನಿಗೆ ಚೂರಿ ಹಾಕಿದ್ದಕ್ಕಾಗಿ ನಾವು ಅವರ ವಿರುದ್ಧ ಸೇಡು ತೀರಿಸಿಕೊಂಡಿದ್ದೇವೆ - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಡಿಸಿಎಂ
ಒಟ್ಟಿನಲ್ಲಿ ಇಬ್ಬರೂ ಪರಸ್ಪರ ಬೆನ್ನಿಗೆ ಚೂರಿ ಹಾಕಿಸಿಕೊಂಡಿದ್ದೀರಿ. ಇನ್ನು ಹೊಟ್ಟೆಗೆ ಯಾವಾಗ ಹಾಕಿ ಕೊಳ್ಳುತ್ತೀರಿ ಎಂದು ಜನ ಕಾಯುತ್ತಿದ್ದಾರೆ.

ಕೆಲವು ರಾಜ್ಯಗಳು ಅನಗತ್ಯ ಸರಕುಗಳನ್ನು ವಿವೇಚನೆ ಇಲ್ಲದೆ ಖರೀದಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಬಿಜೆಪಿ ಸಂಸದರ ಆಯ್ಕೆ ಬಗ್ಗೆ ಹೇಳುತ್ತಿರಬೇಕು.

ಹುಲಿ ಬೇಟೆಯಾಡಲು ಸಿದ್ಧವಾದರೆ ಯಾರೂ ತಡೆಯಲು ಸಾಧ್ಯವಿಲ್ಲ - ಜನಾರ್ದನ ರೆಡ್ಡಿ, ಮಾಜಿ ಸಚಿವ
ಹುಲಿ ಬೇಟೆಯಾಡಿದ್ದರೆ ಇಷ್ಟು ಹೊತ್ತಿಗೆ ನೀವು ಹರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿರಬೇಕಾಗಿತ್ತು.

ಕಟ್ಟಾ ಪ್ರಾಮಾಣಿಕರು ಎಂದು ಹೇಳಿಕೊಳ್ಳುವವರೇ ಅತೀ ಭ್ರಷ್ಟರು - ನರೇಂದ್ರ ಮೋದಿ, ಪ್ರಧಾನಿ
ಪದೇ ಪದೇ ನೀವು ಪ್ರಾಮಾಣಿಕರು ಎಂದು ಘೋಷಿಸಿಕೊಳ್ಳುತ್ತಿರುವುದರ ಅರ್ಥ ಗೊತ್ತಾಯಿತು ಬಿಡಿ.

ನನ್ನ ಸೋದರನ ಮಗ ಚಂದ್ರು ಸಾವಿನ ಪ್ರಕರಣದ ಪೊಲೀಸ್ ತನಿಖೆ ಬಗ್ಗೆ ನನಗೆ ವಿಶ್ವಾಸವಿಲ್ಲ - ರೇಣುಕಾಚಾರ್ಯ, ಶಾಸಕ
ಹಾಗಾದರೆ ತನಿಖೆ ಸರಿಯಾದ ದಾರಿಯಲ್ಲಿದೆ ಎಂದು ಅರ್ಥ.

ಗುಜರಾತ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದ್ದರೂ ಒಳಗೊಳಗೆ ಗಂಡ-ಹೆಂಡತಿಯಂತಿದ್ದಾರೆ - ಅರವಿಂದ್ ಕೇಜ್ರಿವಾಲ್, ದಿಲ್ಲಿ ಸಿಎಂ
ನಿಮ್ಮದು ಸವತಿಯ ಪಾತ್ರವೇ?

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೂಡಾ ಒಂದು ದಿನ ಎಐಸಿಸಿ ಅಧ್ಯಕ್ಷ ಆಗಬಹುದು ಎಂಬುದಕ್ಕೆ ಮಲ್ಲಿಕಾರ್ಜುನ ಖರ್ಗೆಯವರೇ ಸಾಕ್ಷಿ -ರಣದೀಪ್ ಸುರ್ಜೆವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ವರಿಷ್ಠರು ಬರೆದು ಕೊಟ್ಟದ್ದನ್ನು ಒಪ್ಪಿಸುವ ಕಲೆ ಕರಗತ ಆಗಿದ್ದರೆ ಸಾಕು.

ಬ್ರೇಕಿಂಗ್ ನ್ಯೂಸ್ ಬದಲು ಮೇಕಿಂಗ್ ನ್ಯೂಸ್‌ನತ್ತ ವಾರ್ತಾ ವಾಹಿನಿಗಳು ಆದ್ಯತೆ ನೀಡಬೇಕು - ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಸ್ವಾಮೀಜಿಗಳೇ ಬ್ರೇಕಿಂಗ್ ಸುದ್ದಿಯಾಗುತ್ತಿರುವಾಗ ಪಾಪ ಪತ್ರಕರ್ತರು ಏನು ಮಾಡಬೇಕು?

ಕಟ್ಟುವ ಮತ್ತು ಒಡೆಯುವ ಎರಡೂ ಸಾಮರ್ಥ್ಯ ಮಾಧ್ಯಮಕ್ಕೆ ಇದೆ - ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಇತ್ತೀಚೆಗೆ ಸ್ವಾಮೀಜಿಗಳು ತಮ್ಮ ಸಾಮರ್ಥ್ಯವನ್ನು ಒಡೆಯುವುದಕ್ಕಷ್ಟೇ ಸೀಮಿತಗೊಳಿಸುತ್ತಿದ್ದಾರೆ ಎನ್ನುವ ಆರೋಪಗಳಿವೆ.

ಕಾಂಗ್ರೆಸ್‌ನವರಿಗೆ ಅಧಿಕಾರ ಕೊಟ್ಟರೆ ಕರ್ನಾಟಕವನ್ನು ಕೇರಳದ ರೀತಿ ಮಾಡುತ್ತಾರೆ ಎಂಬ ಭಯ ಜನರನ್ನು ಕಾಡುತ್ತಿದೆ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಶಿಕ್ಷಣ, ಆರೋಗ್ಯ, ಅಭಿವೃದ್ಧಿಗೆ ಮಾದರಿಯಾಗಿ ಕೇರಳದ ರೀತಿ ಮಾಡಲಿ ಎನ್ನುವುದೇ ಕರ್ನಾಟಕದ ಜನರ ಆಶಯ.

'ತಬ್ಬಲಿಯು ನೀನಾದೆ ಮಗನೇ' ಎನ್ನುವ ಹಾಗೆ ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಬ್ಬಲಿಯಾಗಿದ್ದಾರೆ - ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ತಬ್ಬಲಿಕ್ಕೆ ನೀವಿಲ್ಲ ಎನ್ನುವ ಕಾರಣದಿಂದಲೇ?

ಅಧಿಕಾರವೆಂಬ ಪಿತ್ತ ಹಣದ ಪಿತ್ತಕ್ಕಿಂತಲೂ ಅತ್ಯಂತ ಕೆಟ್ಟದು - ಸಿ.ಟಿ.ರವಿ, ಶಾಸಕ
ನಿಮಗೆ ಏರಿರುವ ಪಿತ್ತ ಅದನ್ನೇ ಹೇಳುತ್ತಿದೆ.

ಬಿಪಿಎಲ್ ಕಾರ್ಡುದಾರರಿಗೆ ಕರಾವಳಿಯಲ್ಲಿ ಕುಚ್ಚಲಕ್ಕಿ ವಿತರಿಸಲು ನಿರ್ಧಾರ - ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಕುಚ್ಚಲಕ್ಕಿ ವಿತರಿಸದಿದ್ದರೂ ತೊಂದರೆಯಿಲ್ಲ, ದ್ವೇಷ ವಿತರಿಸುವುದನ್ನು ನಿಲ್ಲಿಸಿ.

ಮೇಲ್ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಜಾರಿಗೊಳಿಸುವಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆಯೂ ಇದೆ - ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ದಲಿತರಿಗಿರುವ ಮೀಸಲಾತಿಯನ್ನು ರದ್ದುಗೊಳಿಸಲು ಕಾಂಗ್ರೆಸ್ ಹೋರಾಟ ಯಾವಾಗ?

ಆರ್ಥಿಕ ಉದಾರೀಕರಣಕ್ಕಾಗಿ ಭಾರತವು ಮನಮೋಹನ್ ಸಿಂಗ್ ಗೆ ಋಣಿಯಾಗಿದೆ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಅದರಿಂದಲೇ ನಿಮಗೆ ದೇಶವನ್ನು ದೋಚುವುದು ಇಷ್ಟು ಸುಲಭವಾಗಿರುವುದು. ಋಣಿಯಾಗಲೇಬೇಕು ಬಿಡಿ.

ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ದೇವೆಗೌಡರಿಗೆ ಆಹ್ವಾನ ನೀಡದೆ ಇರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಅವಮಾನ - ಕುಮಾರ ಸ್ವಾಮಿ, ಜೆಡಿಎಸ್ ಮುಖಂಡ
ದೇವೇಗೌಡರು ಅನಾವರಣಗೊಳಿಸುವುದಕ್ಕಾಗಿ ಹೊಸ ಪ್ರತಿಮೆ ನಿರ್ಮಾಣ ಮಾಡುವ ಉದ್ದೇಶ ಇದೆಯೇ?

ನಾಗರಿಕ ಸ್ವಾತಂತ್ರ್ಯ, ಹಕ್ಕುಗಳಿಗೆ ಬದ್ಧರಾಗೋಣ - ಜಾನೆಟ್ ಎಲೆನ್, ಅಮೆರಿಕ ವಿತ್ತ ಸಚಿವೆ
ಇರಾಕ್, ಫೆಲೆಸ್ತೀನ್, ಸಿರಿಯಾ, ಅಫ್ಘಾನಿಸ್ತಾನಗಳೆಲ್ಲ ನಿಮ್ಮ ನಾಗರಿಕ ಸ್ವಾತಂತ್ರ ದ ಹೆಗ್ಗಳಿಕೆಗಳಲ್ಲವೇ?

ಮೂಲ ಸೌಕರ್ಯಗಳು ಸೈಬರ್ ದಾಳಿಗಳಿಗೆ ಸುಲಭದ ತುತ್ತಾಗಬಹುದು - ರಾಜನಾಥ್ ಸಿಂಗ್, ಕೇಂದ್ರ ಸಚಿವ
ಕಾರ್ಪೊರೇಟ್ ದಾಳಿಗೆ ಸಿಕ್ಕಿದ ದೇಶದ ಬಗ್ಗೆ ಒಂದಿಷ್ಟು ಆತಂಕ ವ್ಯಕ್ತಪಡಿಸಿ

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...