ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಆರೋಪ: ಬಿಜೆಪಿ ಮುಖಂಡ ಪೊಲೀಸ್ ವಶಕ್ಕೆ, ಬಿಡುಗಡೆ

Update: 2022-11-14 04:29 GMT

ಕಲಬುರಗಿ, ನ.14: ಶಾಸಕ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆಯೊಡ್ಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ‌ ಎಂಬಾತನನ್ನು ಬ್ರಹ್ಮಪುರ ಠಾಣಾ ಪೊಲೀಸರು ಕಳೆದ ರಾತ್ರಿ ಹೈದರಾಬಾದ್‌‌ ನಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ.

ಮಣಿಕಂಠ ವಿರುದ್ಧ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ರವಿವಾರ ತಡರಾತ್ರಿ ಹೈದರಾಬಾದ್ ನಲ್ಲಿ ಪತ್ತೆಹಚ್ಚಿರುವ ಬ್ರಹ್ಮಪುರ ಪೊಲೀಸ್ ಠಾಣೆಯ ಎಸ್ಸೈ ಸತೀಶ್ ನೇತೃತ್ವದ ಪೊಲೀಸ್ ತಂಡ ಆತನನ್ನು ಕಲಬುರಗಿಗೆ ಕರೆ ತಂದಿದ್ದಾರೆ. ಈ ವೇಳೆ ವಿಚಾರಣೆ ನಡೆಸಿ ಜಾಮೀನಿನ ಮೇಲೆ ಆತನನ್ನು ಬಿಡುಗಡೆಗೊಳಿಸಲಾಗಿದೆ ಎಂದು ಬ್ರಹ್ಮಪುರ ಠಾಣೆಯ ಎಸ್ಸೈ ಸತೀಶ್ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.

ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು 'ನೀವು ನಮಗೆ ಶೂಟ್ ಮಾಡಿ ನಾವು ಸಾಯಲು ಸಿದ್ಧ. ತಮಗೂ ಶೂಟ್ ಮಾಡಲು ಸಿದ್ಧ' ಎಂದು ಮಣಿಕಂಠ ರಾಠೋಡ್ ಈಚೆಗೆ ಹೇಳಿಕೆ ಕೊಟ್ಟು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ತಿಪ್ಪಣಪ್ಪ ಕಮಕನೂರ ದೂರು ನೀಡಿದ್ದರು. ತಿಪ್ಪಣಪ್ಪ ಕಮಕನೂರು ಅವರು ನೀಡಿದ್ದ ದೂರಿನ ಆಧಾರದಲ್ಲಿ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಸನ್ 506 ಅಡಿ ಜೀವ ಬೆದರಿಕೆ ಪ್ರಕರಣ ದಾಖಲಾಗಿತ್ತು.

Full View

Similar News