ಮಂಡ್ಯ | ಕಬ್ಬು ದರ ನಿಗದಿ ಸೇರಿದಂತೆ ರೈತರ ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಚರ್ಚೆ: ಸಿದ್ದರಾಮಯ್ಯ ಭರವಸೆ

ರೈತರ ಅಹೋರಾತ್ರಿ ಧರಣಿಗೆ ವಿಪಕ್ಷ ನಾಯಕರ ಬೆಂಬಲ

Update: 2022-11-14 14:24 GMT

ಮಂಡ್ಯ, ನ.14: ಕಬ್ಬು ದರ ನಿಗದಿ ಸೇರಿದಂತೆ ರೈತರ ಬೇಡಿಕೆಗಳ ಕುರಿತು ಮುಂದಿನ ವಿಧಾಸಭಾ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚೆ ಮಾಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಕಬ್ಬು ದರ ನಿಗದಿ, ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ರೈತಸಂಘದಿಂದ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ವಾರದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಸೋಮವಾರ ಬೆಂಬಲ ನೀಡಿ ಅವರು ಮಾತನಾಡಿದರು.

ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಕೇಂದ್ರ ಸರಕಾರ ನಿಗದಿಪಡಿಸಿದ್ದ ಕಬ್ಬಿನ ದರದ ಜತೆಗೆ ಬೆಂಬಲ ಬೆಲೆ ಘೋಷಿಸಿದ್ದೆ. ಆನಂತರ ಯಾವ ಸರಕಾರಗಳೂ ಬೆಂಬಲ ದರ ನೀಡಿಲ್ಲ. ಮುಖ್ಯಮಂತ್ರಿ ಮತ್ತು ಸಚಿವರು ಬರೀ ಸುಳ್ಳು ಭರವಸೆ ನೀಡುತ್ತಾರೆ ಹೊರತು ರೈತಪರ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಟೀಕಿಸಿದರು.

ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10 ಮೀಸಲಾತಿ ಸಂವಿಧಾನ ವಿರೋಧಿಯಾಗಿದ್ದು, ಕಾಂಗ್ರೆಸ್ ಅದನ್ನು ಒಪ್ಪುವುದಿಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಪುನರ್ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ ಎಂದರು.

ಕೋಲಾರದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ತೀರ್ಮಾನ ಮಾಡಿಲ್ಲ. ಪಕ್ಷದ ವರಿಷ್ಠರು ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ಮಾಜಿ ಸಚಿವರಾದ ಡಾ.ಎಚ್.ಸಿ.ಮಹಾದೇವಪ್ಪ, ಎಂ.ಎಸ್.ಆತ್ಮಾನಂದ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
 

Similar News