ಹನೂರು | ಆರೋಗ್ಯ ಉಪಕೇಂದ್ರಕ್ಕಿಲ್ಲ ಸ್ವಂತ ಕಟ್ಟಡ; ಭೂಮಿ ದಾನ ಮಾಡಲು ಮುಂದಾದ ರೈತ

Update: 2022-11-14 18:29 GMT

ಹನೂರು, ನ.14: ತಾಲೂಕಿನ ಎಲ್ಲೆಮಾಳ ಗ್ರಾಮದಲ್ಲಿ ಆರೋಗ್ಯ ಉಪ ಕೇಂದ್ರ ನಿರ್ಮಿಸಲು ರೈತನೋರ್ವ ಸ್ವಂತ ಜಾಗವನ್ನು ಚಾಮರಾಜನಗರದ ಜಿಲ್ಲಾ ಆರೋಗ್ಯಾಧಿಕಾರಿಯವರ ಕಚೇರಿಗೆ ದಾನ ಮಾಡಲು ಮುಂದಾಗಿರುವುದು ವರದಿಯಾಗಿದೆ.

ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಎಲ್ಲೇಮಾಳ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲದಿದ್ದರಿಂದ ಉಪಕೇಂದ್ರ ಕಟ್ಟಡ ನಿರ್ಮಿಸಲು ಸ್ಥಳ ದಾನಿಗಳಾದ ಕೆಂಚಯ್ಯನದೊಡ್ಡಿಯ ಜಯಮ್ಮ ಮತ್ತು ಕೆ.ವಿ.ಸಿದ್ದಪ್ಪ ಎಂಬವರು ಎಲ್ಲೇಮಾಳ ಗ್ರಾಮದ ಸರ್ವೇ ನಂಬರ್ 28 /20ರಲ್ಲಿರುವ 28 / 20 ಯಲ್ಲಿರುವ  60 x40  ಜಾಗವನ್ನು ಸರ್ಕಾರಕ್ಕೆ ದಾನವಾಗಿ ನೀಡಲು ತೀರ್ಮಾನಿಸಿದ್ದಾರೆ. ಅಲ್ಲದೇ ಆರೋಗ್ಯ ಉಪಕೇಂದ್ರಕ್ಕೆ ಜಯಮ್ಮ ಮತ್ತು ಕೆ.ವಿ.ಸಿದ್ದಪ್ಪ ಎಂದು ಹೆಸರನ್ನು ಇಡಲು ಮನವಿ ಮಾಡಿದ್ದಾರೆ.

ಇವರ ಈ ಸಾಮಾಜಿಕ ಸೇವಾ ಕಾರ್ಯವನ್ನು ಆರೋಗ್ಯ ಇಲಾಖೆ ಪ್ರಶಂಸಿಸಿದೆ. ಆರೋಗ್ಯ ಉಪಕೇಂದ್ರಕ್ಕೆ ದಾನಿಗಳ ನಿವೇಶನವನ್ನು ನೋಂದಣಿ ಮಾಡಿ ಕಟ್ಟಡ ಕಾಮಗಾರಿ ಮುಗಿದ ನಂತರ ಉಪಕೇಂದ್ರಕ್ಕೆ ಜಯಮ್ಮ ಸಿದ್ದಪ್ಪರವರ ಹೆಸರಿಡಲು ಜಿಲ್ಲಾ ಆರೋಗ್ಯಾಧಿಕಾರಿಯವರು ಸೂಚಿಸಿದ್ದಾರೆ.

Similar News