ಜಗ ದಗಲ

Update: 2022-11-15 06:19 GMT

ಇನ್ನಿಲ್ಲವಾಗಲಿದೆ ವಿಶ್ವದ ಅತಿದೊಡ್ಡ ಮಂಜುಗಡ್ಡೆ 

2021ರ ಮೇನಲ್ಲಿ ರೋನ್ನೆ ಐಸ್ ಶೆಲ್ಫ್ನಿಂದ ವಿಶ್ವದ ಅತಿದೊಡ್ಡ ಮಂಜುಗಡ್ಡೆ ಮುರಿದುಹೋಯಿತು ಮತ್ತು ಒಂದು ತಿಂಗಳೊಳಗೆ ಇನ್ನೂ ಮೂರು ತುಂಡುಗಳಾಗಿ ಒಡೆಯಿತು.
ಅಂಟಾರ್ಕ್ಟಿಕಾದಲ್ಲಿ ಅದರ ಮೂಲ ಐಸ್ ಶೆಲ್ಫ್ನಿಂದ ಮುರಿದಾಗ, ವಿಶ್ವದಲ್ಲಿಯೇ ಅತಿ ದೊಡ್ಡ ಮಂಜುಗಡ್ಡೆಯಾಗಿತ್ತು. ಅಂದಿನಿAದ, ಮತ್ತಷ್ಟು ತುಂಡುಗಳಾಗಿ ಒಡೆದಿರುವ ಮತ್ತು ಅವುಗಳಲ್ಲಿ ದೊಡ್ಡದಾದ ಅಂಟಾರ್ಕ್ಟಿಕ್ ಐಸ್ಬರ್ಗ್ A-76A ಡ್ರೇಕ್ ಹಾದಿಯಲ್ಲಿ ತೇಲುತ್ತಿದೆ. ವಿಶ್ವದ ಅತಿ ದೊಡ್ಡ ಮಂಜುಗಡ್ಡೆಯ ಉಳಿದಿರುವ ದೊಡ್ಡ ತುಂಡು ಸಮುದ್ರದಲ್ಲಿ ತೇಲುತ್ತಿರುವಾಗಲೇ ಅದರ ಕೊನೆಯೂ ಹತ್ತಿರವಾಗಿದೆ.
ನಾಸಾದ ಟೆರ್ರಾ ಉಪಗ್ರಹದಲ್ಲಿ ವಿಜ್ಞಾನಿಗಳು ಮಧ್ಯಮ ರೆಸಲ್ಯೂಶನ್ ಇಮೇಜಿಂಗ್ ಸ್ಪೆಕ್ಟ್ರೋರಾಡಿಯೋಮೀಟರ್ (MODIS) ಅನ್ನು ಬರ್ಗ್ನ ನೈಸರ್ಗಿಕ-ಬಣ್ಣದ ಚಿತ್ರವನ್ನು ಪಡೆಯಲು ಬಳಸಿದರು. ಚಿತ್ರವು ಮಂಜುಗಡ್ಡೆಯ ಆಕಾರವನ್ನು ತೋರಿಸುತ್ತಿದ್ದು, ಪ್ರಸಕ್ತ ಅದು ದಕ್ಷಿಣ ಓರ್ಕ್ನಿ ದ್ವೀಪಗಳು ಮತ್ತು ದಕ್ಷಿಣ ಮಹಾಸಾಗರದ ಎಲಿಫೆಂಟ್ ದ್ವೀಪಗಳ ನಡುವೆ ಹಿಮನದಿಯಲ್ಲಿ ತೇಲುತ್ತಿದೆ. ಡ್ರೇಕ್ ಪ್ಯಾಸೇಜ್‌ನಲ್ಲಿ ತನ್ನ ಮೂಲ ಐಸ್ ಶೆಲ್ಫ್ನಿಂದ ಸುಮಾರು 2,000 ಕಿ.ಮೀ. ದೂರದಲ್ಲಿದೆ.
ಯುಎಸ್ ನ್ಯಾಷನಲ್ ಐಸ್ ಸೆಂಟರ್ (USNIC) ಅಳತೆ ಮಾಡಿರುವ ಪ್ರಕಾರ, A76A 135 ಕಿ.ಮೀ. ಉದ್ದ ಮತ್ತು 26 ಕಿ.ಮೀ. ಅಗಲವಿದ್ದು, ಒಟ್ಟು ಪ್ರದೇಶವು ಲಂಡನ್‌ನ ಎರಡು ಪಟ್ಟು ಗಾತ್ರವಿದೆ.
A76A ಮುಂದೆ ಎಲ್ಲಿ ಚಲಿಸುತ್ತದೆ ಎಂಬುದನ್ನು ನೋಡಬೇಕಾಗಿದೆ. ಜುಲೈ 2022ರಲ್ಲಿ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಸೆಂಟಿನೆಲ್-1 ಉಪಗ್ರಹವು ಅಂಟಾರ್ಕ್ಟಿಕ್ ಪೆನಿನ್ಸುಲಾವನ್ನು ಹಾದುಹೋಗುವ ಮಂಜುಗಡ್ಡೆಯನ್ನು ತೋರಿಸಿದಾಗ ಅದು ಈಗಾಗಲೇ ಅದರ ಸ್ಥಾನದಿಂದ ಉತ್ತರಕ್ಕೆ 500 ಕಿಲೋಮೀಟರ್‌ಗಳಷ್ಟು ದೂರದಲ್ಲಿತ್ತು. ಸೆಂಟಿನೆಲ್-1 ಉಪಗ್ರಹಗಳು ಸಿಂಥೆಟಿಕ್ ದ್ಯುತಿರಂಧ್ರ ರೇಡಾರ್ ಉಪಕರಣಗಳನ್ನು ಒಯ್ಯುತ್ತದೆ, ಇದು ಆಸ್ಟ್ರಲ್ ಚಳಿಗಾಲದ ಕತ್ತಲೆಯಲ್ಲಿಯೂ ಮೇಲ್ಮೈಗಳನ್ನು ವೀಕ್ಷಿಸಬಹುದು ಎಂದು ನಾಸಾದ ಭೂಮಿಯ ವೀಕ್ಷಣಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ನಾಸಾದ ಪ್ರಕಾರ, ಮಂಜುಗಡ್ಡೆಗಳು ಸಮುದ್ರದ ಮಂಜುಗಡ್ಡೆಯಲ್ಲ, ಬದಲಾಗಿ, ಅವು ಹಿಮನದಿಗಳು ಅಥವಾ ಐಸ್ ಕಪಾಟಿನ ತೇಲುವ ತುಣುಕುಗಳಾಗಿವೆ. ಡ್ರೇಕ್ ಪ್ಯಾಸೇಜ್ ಮೂಲಕ ಪ್ರಬಲವಾದ ಅಂಟಾರ್ಕ್ಟಿಕ್ ಸರ್ಕಂಪೋಲಾರ್ ಕರೆಂಟ್ ಫನೆಲಿಂಗ್‌ನಿಂದ ಮಂಜುಗಡ್ಡೆಗಳನ್ನು ಸಾಮಾನ್ಯವಾಗಿ ಪೂರ್ವಕ್ಕೆ ತಳ್ಳಲಾಗುತ್ತದೆ ಎನ್ನುತ್ತಾರೆ ತಜ್ಞರು. ಅದನ್ನು ಅನುಸರಿಸಿ ಅವು ಸಮಭಾಜಕದ ಕಡೆಗೆ ಉತ್ತರಕ್ಕೆ ಸರಿಯುತ್ತವೆ. ಮತ್ತು ಅಲ್ಲಿನ ಬೆಚ್ಚಗಿನ ನೀರಿನಲ್ಲಿ ವೇಗವಾಗಿ ಕರಗುತ್ತವೆ.

ಇನ್ನೊಂದು ಮೊಟ್ಟೆಯ ಕಥೆ 

ಭಾರತದಲ್ಲಿ ಮಾತ್ರ, ಆಗದವರ ಮೇಲೆ ಮೊಟ್ಟೆ ಎಸೆದು ಸಂಭ್ರಮಿಸುವವರು ಇದ್ದಾರೆ ಎಂದುಕೊಂಡರೆ ಅದು ಖಂಡಿತ ಸುಳ್ಳು. ನಮ್ಮನ್ನು ನೂರಾರು ವರ್ಷ ಆಳಿಹೋದರಲ್ಲ, ಅವರ ಊರಲ್ಲೂ ಇದ್ದಾರೆ.
ಹೌದು. ಮೊನ್ನೆ ಕಿಂಗ್ ಚಾರ್ಲ್ಸ್ ಮತ್ತು ಕ್ಯಾಮಿಲ್ಲಾ, ಕ್ವೀನ್ ಕಾನ್ಸಾರ್ಟ್ ಜೊತೆಯಾಗಿ ಯಾರ್ಕ್ ನಗರಕ್ಕೆ ಭೇಟಿ ನೀಡಿದ್ದಾಗ ಅವರ ಮೇಲೆ ಪ್ರತಿಭಟನಾಕಾರರು ‘ಈ ದೇಶವನ್ನು ಗುಲಾಮರ ನೆತ್ತರಿಂದ ಕಟ್ಟಲಾಗಿದೆ’ ಎಂದು ಕೂಗುತ್ತಾ ಮೊಟ್ಟೆ ಎಸೆದರಂತೆ.
ಈ ಗದ್ದಲದಿಂದ ಚಾರ್ಲ್ಸ್ ಒಂದು ಕ್ಷಣ ವಿಚಲಿತರಾದರೂ, ಕಡೆಗೆ ಸಾವರಿಸಿಕೊಂಡು, ಮುಂದೆ ಸಾಗಿದರು. ಮೊಟ್ಟೆ ಎಸೆದವನನ್ನು ಪೊಲೀಸರು ಬಿಡಲಿಲ್ಲ. ಅವನ ಮುಖದಲ್ಲಿಯೂ ಅಷ್ಟೆ, ಗೆದ್ದ ಕಳೆಯೋ ಪೆದ್ದಕಳೆಯೋ ರಾರಾಜಿಸುತ್ತಲೇ ಇತ್ತು.
ಹಾಗೆ ನೋಡಿದರೆ, ಬ್ರಿಟನ್ ರಾಜಮನೆತನದವರು ಮೊಟ್ಟೆಯಿಂದ ಹೊಡೆಸಿಕೊಂಡದ್ದು ಇದೇ ಮೊದಲ ಸಲವೇನೂ ಅಲ್ಲವೆನ್ನುತ್ತದೆ ಇತಿಹಾಸ. 1986ರಲ್ಲಿ ರಾಣಿಯು ನ್ಯೂಜಿಲೆಂಡ್‌ನ ರಾಜಮನೆತನದ ಪ್ರವಾಸದ ಸಮಯದಲ್ಲಿ, ಮಾವೋರಿ ಬುಡಕಟ್ಟುಗಳೊಂದಿಗೆ ಬ್ರಿಟನ್‌ನ ಒಪ್ಪಂದವನ್ನು ಪ್ರತಿಭಟಿಸಿದ ಮಹಿಳೆಯೊಬ್ಬರು ಮೊಟ್ಟೆ ಎಸೆದಿದ್ದರು. ತೆರೆದ ಕಾರಿನಲ್ಲಿದ್ದ ರಾಣಿ ಧರಿಸಿದ್ದ ಗುಲಾಬಿ ಬಣ್ಣದ ಕೋಟ್ ಮೇಲೆ ಮೊಟ್ಟೆಯ ಲೋಳೆ ಚೆಲ್ಲಿಕೊಂಡಿತ್ತು.
ಅದಾದ ಮೇಲಿನ, ಮೊನ್ನೆಯ ಈ ಇನ್ನೊಂದು ಮೊಟ್ಟೆಯ ಕಥೆಯಲ್ಲಿ ಎಸೆದಿದ್ದು ಒಂದೇ ಮೊಟ್ಟೆಯಲ್ಲವಂತೆ; ಮೂರು ಮೊಟ್ಟೆಗಳಂತೆ!


ಸೌಂದರ್ಯಕ್ಕಿಂತ ಪೊಲೀಸ್ ವೃತ್ತಿಯೇ ಹೆಮ್ಮೆ

ಕೊಲಂಬಿಯಾದ ಮೆಡೆಲಿನ್‌ನಲ್ಲಿರುವ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ, ಜನರು ಆಕೆಯನ್ನು ವಿಶ್ವದ ಅತ್ಯಂತ ಸುಂದರ ಮಹಿಳಾ ಪೊಲೀಸ್ ಎಂದು ಕರೆಯುತ್ತಿದ್ದಾರೆ. ರಾಷ್ಟ್ರೀಯ ಪೊಲೀಸ್ ಪಡೆಗೆ ಸೇವೆ ಸಲ್ಲಿಸುವುದನ್ನು ಗೌರವವೆಂದು ಪರಿಗಣಿಸುವ ಆಕೆ, ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 4 ಲಕ್ಷ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಆಕೆಯ ಹೆಸರು ಡಯಾನಾ ರಮಿರೆಜ್.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಕೊಲಂಬಿಯಾದ ಈ ಪೋಲೀಸ್ ಅಧಿಕಾರಿ, ವಿಶ್ವದಲ್ಲಿಯೇ ಅತ್ಯಂತ ಅಪಾಯಕಾರಿ ನಗರವೆಂದು ಕುಖ್ಯಾತವಾಗಿರುವ ಮೆಡೆಲಿನ್ ಬೀದಿಗಳಲ್ಲಿ ಗಸ್ತು ತಿರುಗುತ್ತಾರೆ, ಮಾಡೆಲ್ ಆಗಿದ್ದರೂ, ಆನ್‌ಲೈನ್‌ನಲ್ಲಿ ಪ್ರಭಾವಿಯಾಗಿದ್ದರೂ ಆಕೆಗೆ ತನ್ನ ಪೊಲೀಸ್ ಕೆಲಸ ಬಿಡಲು ಇಷ್ಟವಿಲ್ಲ. 
ಅಪರಾಧ ಕೃತ್ಯಗಳ ವಿರುದ್ಧ ಕಾದಾಡುವ ಈ ದಿಟ್ಟೆ, ವೃತ್ತಿಪರರನ್ನು ಗುರುತಿಸುವ ಗುರಿಯನ್ನು ಹೊಂದಿರುವ ಇನ್‌ಸ್ಟಾಫೆಸ್ಟ್ ಅವಾರ್ಡ್ಸ್ನಲ್ಲಿ ವರ್ಷದ ಅತ್ಯುತ್ತಮ ಪೊಲೀಸ್ ಅವಾರ್ಡ್ಗೆ ನಾಮನಿರ್ದೇಶನಗೊಂಡಿದ್ದಾರೆ.
ಈ ನಾಮನಿರ್ದೇಶನದೊಂದಿಗೆ ಪೊಲೀಸ್ ಪಡೆಯನ್ನು ಪ್ರತಿನಿಧಿಸುವುದು ತನಗೆ ಹೆಮ್ಮೆಯ ಸಂಗತಿಯಾಗಿದೆ ಎನ್ನುತ್ತಾರೆ ರಮಿರೆಜ್. ಸಾಮಾಜಿಕ ಮಾಧ್ಯಮಗಳು ಪ್ರತಿಯೊಬ್ಬರ ಉತ್ತಮ ಕೆಲಸವನ್ನು ಗೌರವಿಸುವುದರ ಬಗ್ಗೆಯೂ ಅವರಿಗೆ ಖುಷಿಯಿದೆ.