ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಗುರುತಿಸಿದ್ದ ಸಾಕ್ಷಿಗೆ ಜೀವ ಬೆದರಿಕೆ

ಸಿಂಧಗಿ ಪಾಕ್ ಧ್ವಜ ಹಾರಿಸಿದ ಪ್ರಕರಣದಲ್ಲೂ ಪರಶುರಾಮ್ ಇದ್ದ ಎಂದು ಗುರುತಿಸಿದ ಸಾಕ್ಷಿ

Update: 2022-11-15 11:30 GMT

ಬೆಂಗಳೂರು: ಗೌರಿ ಲಂಕೇಶ್‌ ಹತ್ಯೆಯ ಆರೋಪಿಗಳಲ್ಲಿ ಓರ್ವನಾದ ಪರಶುರಾಮ್ ವಾಗ್ಮೋರೆ ಎಂಬಾತನನ್ನು ಗುರುತಿಸಿದ್ದ ಸಾಕ್ಷಿಯ ಮನೆಗೆ ತಂಡವೊಂದು ನುಗ್ಗಿ, ಫೋನ್ ಮೂಲಕ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಆರೋಪಿಗಳಿಗೆ ನ್ಯಾಯಾಲಯವು ಮೌಖಿಕ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.

ಗೌರಿ ಲಂಕೇಶ್‌ ಹತ್ಯೆಯ ಸಾಕ್ಷಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು, ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳಿಗೆ ಮೌಖಿಕ ಎಚ್ಚರಿಕೆ ನೀಡಿದೆ. ಅದಲ್ಲದೆ, ಈ ರೀತಿಯ ಘಟನೆ ಮರುಕಳಿಸಬಾರದೆಂದು ತಾಕೀತು ಮಾಡಿದ್ದಾರೆ.

ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್ ಬಾಲನ್‌ರವರು ಮಾಹಿತಿ ನೀಡಿ, ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸಮುಚ್ಚಯದ ಹಾಲ್ ನಂ.1ರಲ್ಲಿ ಸೆಷನ್ಸ್ ನ್ಯಾಯಾಧೀಶರಾದ ರಾಮಚಂದ್ರ ಪಿ. ಹುದ್ದಾರ್‌ರವರು ಗೌರಿ ಲಂಕೇಶ್ ಹತ್ಯೆಯ ವಿಚಾರಣೆ ನಡೆಸುತ್ತಿದ್ದಾರೆ. ಈ ತಿಂಗಳ ವಿಚಾರಣೆಯ ಕೊನೆಯ ದಿನವಾದ ಇಂದು ಪರಶುರಾಮ್ ವಾಗ್ಮೋರೆಯ ಸ್ನೇಹಿತನೊಬ್ಬ ಆರೋಪಿಯನ್ನು ಗುರುತಿಸುವ ಮತ್ತು ಆರೋಪಿಯ ಮೇಲಿರುವ ಇತರ ಪ್ರಕರಣಗಳ ಬಗ್ಗೆ ಸಾಕ್ಷಿ ನುಡಿಯಬೇಕಾಗಿತ್ತು. ಆದರೆ ನಿನ್ನೆಯೇ ನಾಲ್ಕು ಜನರು ಆತನ ಮನೆಗೆ ನುಗ್ಗಿ ಸಾಕ್ಷಿ ನುಡಿಯದಂತೆ ಬೆದರಿಕೆಯೊಡ್ಡಿದ್ದಾರೆ ಮತ್ತು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿದ್ದಾಗ ಎರಡು ಮೂರು ಬಾರಿ ಫೋನ್ ಕರೆಗಳ ಮೂಲಕ ಧಮಕಿ ಹಾಕಿದ್ದಾರೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬೆದರಿಕೆಗಳ ಹೊರತಾಗಿಯೂ ಸಾಕ್ಷಿಯಾಗಿದ್ದ ದೌಲತ್‌ರವರು ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಗುರುತಿಸಿದ್ದು, ಈ ಹಿಂದೆ ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿದ ಆರೋಪಿಯಾಗಿದ್ದ ಎಂದು ಸಾಕ್ಷಿ ನುಡಿದಿದ್ದಾರೆ. ಸಾಕ್ಷಿಯನ್ನು ಪೊಲೀಸ್ ಬೆಂಗಾವಲಿನಲ್ಲಿ ಸಿಂಧಗಿಗೆ ತಲುಪಿಸಬೇಕು ಮತ್ತು ಅಲ್ಲಿನ ಸ್ಥಳೀಯ ಪೊಲೀಸರು ಸಾಕ್ಷಿಗೆ ಭದ್ರತೆ ಒದಗಿಸಬೇಕೆಂದು ಮೌಖಿಕ ನಿರ್ದೇಶನ ನೀಡಿದ್ದಾರೆ. ನ್ಯಾಯಾಧೀಶರು ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದ್ದಾರೆ.

ಜನವರಿ 1, 2012ರಂದು ಸಿಂಧಗಿಯ ತಹಶೀಲ್ದಾರ್ ಕಚೇರಿಯ ಎದುರು ದುಷ್ಕರ್ಮಿಗಳು ಪಾಕಿಸ್ತಾನದ ಧ್ವಜ ಹಾರಿಸಿ ಗಲಭೆಗೆ ಯತ್ನಿಸಿದ್ದರು. ಅದರಲ್ಲಿ ಪರುಶುರಾಮ್ ವಾಗ್ಮೋರೆ 5ನೇ ಆರೋಪಿಯಾಗಿದ್ದ. ಆದರೆ 2018ರಲ್ಲಿ ವಿಜಯಪುರದ 1ನೇ ಹೆಚ್ಚುವರಿ ನ್ಯಾಯಾಲವು ಆರು ಜನ ಆರೋಪಿಗಳನ್ನು ಆರೋಪಮುಕ್ತಗೊಳಿಸಿತ್ತು. ಆದರೆ ಆ ಪ್ರಕರಣದಲ್ಲಿ ಪರಶುರಾಮ್ ಭಾಗಿಯಾಗಿದ್ದ ಎಂದೂ ದೌಲತ್ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Similar News