ಸೈಕಲ್ ವಿತರಿಸುವ ಬಗ್ಗೆ ಇಲಾಖೆ ಈವರೆಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

''ರಾಜ್ಯ ಪಠ್ಯಕ್ರಮ ಚೌಕಟ್ಟು ರೂಪಿಸಲು ತಜ್ಞರ ಸಮಿತಿ ರಚನೆ''

Update: 2022-11-15 13:49 GMT

ಬೆಂಗಳೂರು, ನ.15: ಎಂಟನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುವ ಸಂಬಂಧ ಶಿಕ್ಷಣ ಇಲಾಖೆ ಈವರೆಗೆ ಯಾವುದೆ ನಿರ್ಣಯ ಕೈಗೊಂಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕೇಂದ್ರ ಸರಕಾರವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ) ಅನ್ವಯ ರಾಷ್ಟ್ರೀಯ ಪಠ್ಯಕ್ರಮವನ್ನು ಬಿಡುಗಡೆ ಮಾಡಿದೆ. ಅದೇ ರೀತಿ, ರಾಜ್ಯ ಪಠ್ಯಕ್ರಮವನ್ನು ರೂಪಿಸಲು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿರುವ ತಜ್ಞರ ಸಮಿತಿಯನ್ನು ರಚಿಸಲಾಗುವುದು'' ಎಂದು ತಿಳಿಸಿದರು.

''ತಜ್ಞರು ನೀಡುವ ವರದಿಯನ್ನು ಆಧರಿಸಿ ಸರಕಾರ ಮುಂದಿನ ಹೆಜ್ಜೆ ಇಡಲಿದೆ. ಅಲ್ಲದೆ, ಎನ್‍ಇಪಿ ಅನುಷ್ಠಾನಗೊಳಿಸುವ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಲು ಐಎಎಸ್ ಅಧಿಕಾರಿ ಎಂ.ಟಿ.ರೇಜು ಸಂಚಾಲಕರಾಗಿರುವ ಸಮಿತಿಯನ್ನು ರಚಿಸಲಾಗಿದೆ'' ಎಂದರು.

''ಡಿ.25ರೊಳಗೆ ನೂತನ ಪಠ್ಯಕ್ರಮ ಅಂತಿಮಗೊಳಿಸಲು ಸಿದ್ಧತೆ ನಡೆಸಲಾಗಿದೆ. ಈಗಾಗಲೆ ಬೋಧನಾ ಕ್ರಮದಲ್ಲಿ ಬದಲಾವಣೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ತರಬೇತಿಗೆ ಚಾಲನೆ ನೀಡಲಾಗಿದೆ'' ಎಂದು ಹೇಳಿದರು. 

''6 ರಿಂದ 8ನೆ ತರಗತಿಗಳಲ್ಲಿ ಖಾಲಿ ಇರುವ ಪದವೀಧರ ಶಿಕ್ಷಕರ ಹುದ್ದೆಗಳಿಗೆ ಹಾಲಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರನ್ನು ಸೇವಾ ಜೇಷ್ಠತೆ ಆಧಾರದಲ್ಲಿ ಪರಿಶೀಲಿಸಿ ಭಡ್ತಿ ನೀಡಲು ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ. 15 ಸಾವಿರ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಪರೀಕ್ಷೆ ನಡೆಸಲಾಗಿದೆ. 11 ರಿಂದ 12 ಸಾವಿರ ಅರ್ಹ ಅಭ್ಯರ್ಥಿಗಳು ದೊರಕುವ ನಿರೀಕ್ಷೆ ಇದೆ'' ಎಂದು ಅವರು ತಿಳಿಸಿದರು.

''ಈ ವರ್ಷ ಒಂದು ಸಾವಿರ ಕೋಟಿ ರೂ.ವೆಚ್ಚದಲ್ಲಿ ಎಂಟು ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸುತ್ತಿದ್ದೇವೆ. ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರ ಗೌರವ ಧನ 2500 ರೂ. ಹಾಗೂ ಪ್ರೌಢ ಶಾಲೆಯ ಅತಿಥಿ ಶಿಕ್ಷಕರ ಗೌರವ ಧನ 3000 ರೂ.ಹೆಚ್ಚಳ ಮಾಡಲಾಗುವುದು. ಕಲಿಕೆಯ ಗುಣಮಟ್ಟವನ್ನು ಹೆಚ್ಚಳ ಮಾಡಲು ನಾವು ಆದ್ಯತೆ ನೀಡಿದ್ದೇವೆ'' ಎಂದು ತಿಳಿಸಿದರು. 

''ಸರಕಾರಿ ಶಾಲೆಗಳ ನಿರ್ಮಾಣಕ್ಕೆ ಈ ಹಿಂದೆ ಅನೇಕರು ತಮ್ಮ ಜಮೀನುಗಳನ್ನು ದಾನವಾಗಿ ನೀಡಿದ್ದರು. ಆದರೆ, ದಾನಕ್ಕೆ ಸಂಬಂಧಿಸಿದ ಜಾಗದ ದಾಖಲೆಗಳನ್ನು ಕ್ರಮಬದ್ಧವಾಗಿಡಲು ಸಾಧ್ಯವಾಗಿರಲಿಲ್ಲ. ಕೆಲವು ಕಡೆ ದಾನ ನೀಡಿರುವವರ ಕುಟುಂಬ ಸದಸ್ಯರು ಭೂಮಿಯ ಇಂತಿಷ್ಟು ಭಾಗವನ್ನು ಬಿಟ್ಟುಕೊಡುವಂತೆ ಕೇಳುತ್ತಿದ್ದಾರೆ. ಇಂತಹ ಸುಮಾರು 18 ಸಾವಿರ ಪ್ರಕರಣಗಳ ಪೈಕಿ 3 ಸಾವಿರ ಪ್ರಕರಣಗಳನ್ನು ಈವರೆಗೆ ಇತ್ಯರ್ಥಪಡಿಸಿದ್ದೇವೆ'' ಎಂದು ನಾಗೇಶ್ ತಿಳಿಸಿದರು.
 

Similar News