BJPvsBJP ಕಿಚ್ಚು ಎಷ್ಟಿದೆ ಎನ್ನಲು ಪ್ರತಾಪ್ ಸಿಂಹ vs ರಾಮದಾಸ್ ಕಾಳಗವೇ ಸಾಕ್ಷಿ: ಕಾಂಗ್ರೆಸ್

''ಬಿಜೆಪಿ ಶಾಸಕರೇ ಕಟ್ಟಿಸಿದ ಬಸ್ ನಿಲ್ದಾಣವನ್ನು ಒಡೆಯಲು ಹೊರಟಿದ್ದಾರೆ...''

Update: 2022-11-16 08:10 GMT

ಬೆಂಗಳೂರು: ಕೃಷ್ಣರಾಜ ವಿಧಾನ ಸಭೆ ಕ್ಷೇತ್ರದ ಊಟಿ ರಸ್ತೆಯಲ್ಲಿರುವ ಬಸ್ ನಿಲ್ದಾಣ ನಿರ್ಮಾಣದ ವಿವಾದ ಸೃಷ್ಟಿ ಬಗ್ಗೆ ಬಿಜೆಪಿಯನ್ನ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಮೈಸೂರಿನಲ್ಲಿ ಬಿಜೆಪಿ ಸಂಸದರು ಹಾಗೂ ಶಾಸಕರ ಮಧ್ಯೆ ಕಾಳಗವೇ ನಡೆಯುತ್ತಿದೆ ಎಂದು ಹೇಳಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,  ''#BJPvsBJP ಕಿಚ್ಚು ಎಷ್ಟಿದೆ ಎನ್ನಲು ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಾಪ್ ಸಿಂಹ vs ರಾಮದಾಸ್ ಕಾಳಗವೇ ಸಾಕ್ಷಿ. ಶಾಸಕರು ಕಟ್ಟಿಸಿದ ಬಸ್ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ! ಬೇರೆಯವರ ಮನೆಯ ದೋಸೆಯ ತೂತನ್ನು ಹುಡುಕುವ ಬದಲು ಬಿಜೆಪಿ  ತಮ್ಮ ಮನೆಯ ಕಾವಲಿಯ ತೂತನ್ನು ನೋಡಿಕೊಂಡರೆ ಒಳಿತು!'' ಎಂದು ಟೀಕಿಸಿದೆ.

''ಈ ಹಿಂದೆ ಬ್ಯಾರಿಕೆಡ್ ಮುರಿದಿದ್ದ ಸಂಸದ ಪ್ರತಾಪ್ ಸಿಂಹ ಈಗ ಮೈಸೂರಿನ ಬಸ್ ನಿಲ್ದಾಣ ಒಡೆಯುತ್ತೇನೆ ಎನ್ನುತ್ತಿದ್ದಾರೆ. ಬಸ್ ನಿಲ್ದಾಣಕ್ಕೆ ಜೆಸಿಬಿ ನುಗ್ಗಿಸುತ್ತೇನೆ ಎನ್ನುವ ಸಂಸದರ ಮನೆಗೆ ಜೆಸಿಬಿ ನುಗ್ಗಿಸಬೇಕು, ಏಕೆಂದರೆ, ಸಾರ್ವಜನಿಕ ಆಸ್ತಿ ಹಾನಿಪಡಿಸುವವರ ಆಸ್ತಿ ಮಟ್ಟುಗೋಲು ಹಾಗೂ ಜೆಸಿಬಿ ನುಗ್ಗಿಸುವುದು ಇವರದ್ದೇ ಪಕ್ಷದ ಆಗ್ರಹಗಳಲ್ಲವೇ?'' ಎಂದು ಕಾಂಗ್ರೆಸ್ ಕಿಡಿಕಾರಿದೆ. 

ಇದನ್ನೂ ಓದಿ: ಧರ್ಮದ ಆಧಾರದ ಮೇಲೆ ಬಸ್ ನಿಲ್ದಾಣ ನಿರ್ಮಿಸಿಲ್ಲ, ಗುತ್ತಿಗೆದಾರ ಮುಸ್ಲಿಮ್ ಅಲ್ಲ: ಶಾಸಕ ಎಸ್.ಎ. ರಾಮದಾಸ್

► ಪ್ರತಾಪ್‌ ಸಿಂಹ ಹೇಳಿಕೆಗೆ ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟನೆ

'ಬಸ್ ನಿಲ್ದಾಣ ಗುಂಬಜ್ ರೀತಿ ಇದೆ. ಅದನ್ನು ಒಡೆಯುತ್ತೇನೆ' ಎಂಬ ವಿವಾದಕ್ಕೆ ಕಾರಣವಾಗಿದ್ದ ಸಂಸದ ಪ್ರತಾಪ್‌ ಸಿಂಹ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಶಾಸಕ ಎಸ್.ಎ.ರಾಮದಾಸ್,  ''ಕೆ.ಆರ್.ಕ್ಷೇತ್ರದಲ್ಲಿ ಬಸ್ ನಿಲ್ದಾಣಗಳನ್ನು ಅರಮನೆ ವಿನ್ಯಾಸದ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆಯೇ ಹೊರತು, ಯಾವುದೇ ಧರ್ಮದ ಆಧಾರದ ಮೇಲೆ ಅಲ್ಲ. ವಿನ್ಯಾಸವನ್ನು ತಪ್ಪಾಗಿ ಅರ್ಥೈಸಿಕೊಂಡು ಮಸೀದಿಯಂತೆ ನಿರ್ಮಿಸಲಾಗುತ್ತಿದೆ ಹಾಗೂ ಗುತ್ತಿಗೆದಾರ ಮುಸ್ಲಿಮ್ ಅಲ್ಲ'' ಎಂದು ಹೇಳಿದ್ದಾರೆ. 

Similar News