ಪೆನ್ನಾರ್ ನದಿ ನೀರು ಹಂಚಿಕೆ ವಿವಾದ | ಡಿ.14ಕ್ಕೆ ಮತ್ತೆ ವಿಚಾರಣೆ: ಸಚಿವ ಕಾರಜೋಳ

Update: 2022-11-16 11:38 GMT

ಬೆಂಗಳೂರು, ನ. 16: ದಕ್ಷಿಣ ಪಿನಾಕಿನಿ(ಪೆನ್ನಾರ) ನದಿ ಕಣಿವೆಯಲ್ಲಿ ಚೆಕ್ ಡ್ಯಾಂ ಕಾಮಗಾರಿ ಪ್ರಕರಣ ಡಿಸೆಂಬರ್ 14ಕ್ಕೆ ಸುಪ್ರಿಂ ಕೋರ್ಟ್‍ನಲ್ಲಿ ಮತ್ತೆ ವಿಚಾರಣೆಗೆ ಬರಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.

ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ನದಿಯ ಕಣಿವೆಯಲ್ಲಿ ಕರ್ನಾಟಕ ರಾಜ್ಯವು ಕೈಗೊಂಡಿರುವ ಮಾರ್ಕಂಡೇಯ  ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ, ಯಲ್ಲಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಕೋಟೆ ಕೆರೆಯ ವರೆಗೆ ಕಾಮಗಾರಿ ಚಟುವಟಿಕೆ, ಬ್ಯಾಳಹಳ್ಳಿ ಗ್ರಾಮದ ಹತ್ತಿರ ಪೆನ್ನೆಯಾರ್ ನದಿಯಿಂದ ನೀರು ಹರಿಸುವ ಕಾಮಗಾರಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ತಮಿಳುನಾಡು, ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಸರಕಾರದ ಮೇಲೆ ದಾವೆ ಹೂಡಿದೆ.

ಈ ದಾವೆಗೆ ಸಂಬಂಧಿಸಿದಂತೆ ಕರ್ನಾಟಕವು ತನ್ನ ಲಿಖಿತ ಆಕ್ಷೇಪಣೆಗಳ ಹೇಳಿಕೆ ದಾಖಲಿಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ತಮಿಳುನಾಡು ಸಲ್ಲಿಸಿದ ಪ್ರತಿ ಹೇಳಿಕೆಗೆ ಕರ್ನಾಟಕವು ತನ್ನ ಮರು ಪ್ರತ್ಯುತ್ತರವನ್ನು ಸಲ್ಲಿಸಿದೆ. ಈ ಪ್ರಕರಣ ಕೋರ್ಟ್‍ನಲ್ಲಿ ವಿಚಾರಣೆಗೆ ಬಂದಿತ್ತು. ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಟ್ ಪೆನ್ನಾರ್ ಕಣಿವೆಗೆ ಸಂಬಂಧಪಟ್ಟಂತೆ ಚರ್ಚಿತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆಗೆ ಸಮಿತಿಗೆ ಒಪ್ಪಿಸಲಾಗಿದ್ದು, ಟ್ರಿಬ್ಯುನಲ್ ರಚನೆ ಕುರಿತಂತೆ ಕೇಂದ್ರ ನಿರ್ಣಯ ಕೈಗೊಳ್ಳಬೇಕಾಗಿರುವುದರಿಂದ 4 ವಾರಗಳ ಕಾಲಾವಕಾಶ ಕೇಳಿದ್ದಾರೆ. ಈಗಾಗಲೇ ಈ ಸಮಿತಿಯು 2 ಸಭೆ ನಡೆಸಿದ್ದು, ಈ ಪ್ರಕರಣದಲ್ಲಿ ನ್ಯಾಯಾಧೀಕರಣ ರಚನೆಯ ಅವಶ್ಯಕತೆ ಇಲ್ಲವೆಂದು ಈಗಾಗಲೇ ಕೇಂದ್ರ ಸಮಿತಿಯ ಮುಂದೆ ಕರ್ನಾಟಕವು ತನ್ನ ನಿಲುವನ್ನು ಪ್ರತಿಪಾದಿಸಿದೆ. ಈ ನಿಲುವನ್ನೇ ರಾಜ್ಯವು ಮುಂದುವರೆಸುತ್ತದೆ ಎಂದು ಅವರು ತಿಳಿಸಿದ್ದಾರೆ.

Similar News