'ವಿವಾದಿತ ಬಸ್‌ ನಿಲ್ದಾಣ ವಾರದೊಳಗೆ ​ತೆರವುಗೊಳಿಸಿ'; ಮೈಸೂರು ಪಾಲಿಕೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಟಿಸ್

Update: 2022-11-16 12:41 GMT

ಮೈಸೂರು,ನ.16: ಮೈಸೂರು ನಗರದ ಜೆಎಸ್‍ಎಸ್ ಕಾಲೇಜು ಬದಿಯ ಮೈಸೂರು- ನಂಜನಗೂಡು ರಸ್ತೆಯಲ್ಲಿ ನಿರ್ಮಿಸುತ್ತಿರುವ ನೂತನ ಬಸ್ ನಿಲ್ದಾಣವನ್ನು ಒಂದು ವಾರದೊಳಗೆ ತೆರವು ಮಾಡುವಂತೆ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾದಿಂದ ಪಾಲಿಕೆ ಆಯುಕ್ತರು ಮತ್ತು ಕೆ.ಆರ್.ಐ.ಡಿ.ಎಲ್ ಎಂಜಿನಿಯರ್ ಗೆ ನೋಟೀಸ್ ಜಾರಿ ಮಾಡಲಾಗಿದೆ.

'ಬಸ್ ನಿಲ್ದಾಣ ಗುಂಬಜ್ ರೀತಿ ಇದೆ. ಅದನ್ನು ಒಡೆಯುತ್ತೇನೆ' ಎಂಬ ವಿವಾದಕ್ಕೆ ಕಾರಣವಾಗಿದ್ದ ಸಂಸದ ಪ್ರತಾಪ್‌ ಸಿಂಹ ಹೇಳಿಕೆಗೆ ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟನೆ ಕೂಡ ನೀಡಿದ್ದರು. 

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಸುಮಾರು 10 ಲಕ್ಷ ರೂ. ಅನುದಾನ ನೀಡಿ ಈ ನೂತನ ಬಸ್ ನಿಲ್ದಾಣ ನಿರ್ಮಿಸಿದ್ದರು. ಬಸ್ ನಿಲ್ದಾಣ ಮೇಲಿನ ಗೋಳಾಕಾರದ ಗುಮ್ಮಟಗಳು ಈಗ ವಿವಾದಕ್ಕೀಡಾಗಿದ್ದು, ಈ ವಿಚಾರ ಶಾಸಕ ಎಸ್.ಎ.ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ ನಡುವೆ ಜಟಾಪಟಿಗೆ ಕಾರಣವಾಗಿದೆ ಎನ್ನಲಾಗಿದೆ.

ಇವುಗಳ ಮಧ್ಯೆ ಹೈವೇ ಅಥಾರಿಟಿ ಜಾರಿ ಮಾಡಿರುವ ನೋಟೀಸ್‍ನಲ್ಲಿ ಇದೊಂದು ವಿವಾದಾತ್ಮಕ ಅಕ್ರಮ ಕಟ್ಟಡ, ಯಾವುದೇ ಪೂರ್ವಾನುಮತಿ ಪಡೆಯದೆ ಇದನ್ನು ನಿರ್ಮಿಸಲಾಗಿದೆ. ಜತೆಗೆ ಕಟ್ಟಡ ವಿನ್ಯಾಸವು ಕೋಮು ಭಾವನೆ ಕೆರಳಿಸುವಂತಿದ್ದು ಕೂಡಲೇ ಇದನ್ನು ತೆರವುಗೊಳಿಸಿ ಎಂದು ತಿಳಿಸಲಾಗಿದೆ.  

ಇದನ್ನೂ ಓದಿ: ಧರ್ಮದ ಆಧಾರದ ಮೇಲೆ ಬಸ್ ನಿಲ್ದಾಣ ನಿರ್ಮಿಸಿಲ್ಲ, ಗುತ್ತಿಗೆದಾರ ಮುಸ್ಲಿಮ್ ಅಲ್ಲ: ಶಾಸಕ ಎಸ್.ಎ. ರಾಮದಾಸ್

ಸಾರ್ವಜನಿಕರ  ಆಕ್ರೋಶ:  ''ಕಟ್ಟಡ ಒಡೆದರೆ 10 ಲಕ್ಷ ರೂ, ಜನರ ತೆರಿಗೆ ಹಣ ಹಾಳುಮಾಡಿದಂತೆ. ಇದಕ್ಕೆ ಯಾರು  ಹೊಣೆ? ಶಾಸಕರೋ? ಅಧಿಕಾರಿಗಳೋ ಅಥವಾ ಕಟ್ಟಡ ಒಡೆಯಲು ಮುಂದಾಗಿರುವ ಸಂಸದರೋ ? '' ಎಂದು  ಸಾರ್ವಜನಿಕರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

---------------------------------------------

'ಪಾರಂಪರಿಕ ವಿನ್ಯಾಸವನ್ನೇ ಹೊಂದಿರ ಬೇಕು ಎಂದು ತೀರ್ಮಾನಿಸಲಾಗಿದೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

''ಇಡೀ ಪ್ರಪಂಚದಲ್ಲಿ 8 ಬಗೆಯ ಆರ್ಕಿಟೆಕ್ಚರ್ ಗಳನ್ನು ಬಳಸಲಾಗುತ್ತಿದೆ. ಮೈಸೂರು ಅರಮನೆಯ ಮೇಲ್ಬಾಗದ ಗೋಪುರವನ್ನು ಮೋಘಲರ ಆರ್ಕಿಟೆಕ್ಚರ್ ಎಂದು ಕರೆಯುತ್ತೇವೆ. ಬ್ರಿಟನ್ ಸೇರಿದಂತೆ ಪ್ರಪಂಚದಾದ್ಯಂತ ಈ ವಿನ್ಯಾಸ ಬಳಸಲಾಗಿದೆ. ಮೈಸೂರು ಅರಮನೆ ವಿನ್ಯಾಸ ಆಧಆರದ ಮೇಲೆ ಅಲ್ಲಿನ ಪಾಲಿಕೆ, ಶಾಸಕರು ಸೇರಿ ಅರಮನೆಯ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ  ನಿರ್ಮಾಣ ಮಾಡಬೇಕಾದರೂ ಅದು ಅರಮನೆಯ ಪಾರಂಪರಿಕ ವಿನ್ಯಾಸವನ್ನೇ ಹೊಂದಿರ ಬೇಕು ಎಂದು ತೀರ್ಮಾನಿಸಲಾಗಿದೆ. ಇದು ಮೈಸೂರು ಪಾಲಿಕೆಯ ಬೈಲಾದಲ್ಲೂ ಇದೆ. ಒಂದು ಶೌಚಾಲಯ ಕಟ್ಟಿದರೂ ಅದರ ವಿನ್ಯಾಸ ಈ ರೀತಿ ಇರಬೇಕು ಎಂದು ಕಾನೂನು ಇದೆ'' ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 

Similar News