224 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ಸಿದ್ದರಾಮಯ್ಯ ಗೆಲ್ಲುತ್ತಾರೆ: ಡಿ.ಕೆ.ಶಿವಕುಮಾರ್

''ಮೂರು ಸಮೀಕ್ಷೆಯಲ್ಲಿ ಬಿಜೆಪಿ ಸಂಖ್ಯೆ 50 ದಾಟುತ್ತಿಲ್ಲ...''

Update: 2023-02-21 12:28 GMT

ಬೆಂಗಳೂರು: ''ಸಿದ್ದರಾಮಯ್ಯನವರು ಕೋಲಾರಕ್ಕೆ ಹೋದರೆ ಬಿಜೆಪಿಯ 10 ನಾಯಕರು ಸುದ್ದಿಗೋಷ್ಠಿ ಮಾಡುತ್ತಾರೆ'' ಎಂದು  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D. K. Shivakumar) ವ್ಯಂಗ್ಯವಾಡಿದ್ದಾರೆ. 

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,  ''ಪ್ರಹ್ಲಾದ್ ಜೋಷಿ ಅವರೇ ಸಿದ್ದರಾಮಯ್ಯರಿಗೆ ಕ್ಷೇತ್ರ ಇಲ್ಲ ಎನ್ನುತ್ತೀರಿ. ಹಾಗಾದರೆ ನಿಮ್ಮ ಮೋದಿ ಗುಜರಾತ್ ಬಿಟ್ಟು ವಾರಣಾಸಿಯಲ್ಲಿ ಸ್ಪರ್ಧಿಸಿದ್ದು ಏಕೆ? ಸ್ಮೃತಿ ಇರಾನಿ ಅಮೇಥಿಯಲ್ಲಿ ನಿಂತಿದ್ದು ಏಕೆ? ಸಿದ್ದರಾಮಯ್ಯ 224 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ಗೆಲ್ಲುತ್ತಾರೆ. ನಿಮ್ಮ ಮೂರು ಸಮೀಕ್ಷೆಯಲ್ಲಿ ನಿಮ್ಮ ಸಂಖ್ಯೆ 50 ದಾಟುತ್ತಿಲ್ಲ. ಹೀಗಾಗಿ ನೀವು ತಕತಕನೆ ಕುಣಿಯುತ್ತಿದ್ದೀರಿ'' ಎಂದು ವಾಗ್ದಾಳಿ ನಡೆಸಿದರು. 

''ಸಿದ್ದರಾಮಯ್ಯ, ಮಹದೇವ್ ಪ್ರಸಾದ್, ಆಸ್ಕರ್ ಫನಾರ್ಂಡೀಸ್ ಅವರ ಕೊಡುಗೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿ ಆಗುತ್ತಿದೆ. ಇದರಲ್ಲಿ 100 ಕೋಟಿ ರೂ.ಕಮಿಷನ್ ಪಡೆದಿದ್ದೀರಿ ಎಂದು ಮಂಡ್ಯದಲ್ಲಿ ಆರೋಪ ಮಾಡಿದ್ದಾರೆ. ಈ ಬಗ್ಗೆ ನೀವು ಉತ್ತರವೇ ಕೊಟ್ಟಿಲ್ಲ. ನಿಮ್ಮ ಸಂಸದ ನಿಧಿಯನ್ನು ಬಿಡದೇ ತಿನ್ನುತ್ತಿದ್ದೀರಿ. ನಿಮ್ಮ ಯೋಗ್ಯತೆ ಏನು ಎಂದು ನೋಡಿಕೊಳ್ಳಿ. ಸಿದ್ದರಾಮಯ್ಯನವರ ವಿರುದ್ಧ ಟೀಕೆ ಮಾಡಲು ಆರೆಸ್ಸೆಸ್ ನವರು ತರಬೇತಿ ನೀಡಿ ಕಳುಹಿಸುತ್ತಿದ್ದಾರೆ'' ಎಂದು ಅವರು ದೂರಿದರು.

''7ಪಿಎಂ ಸಿಎಂ'': ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಜನ ನಿಮ್ಮನ್ನು 7 ಪಿಎಂ ಸಿಎಂ ಎಂದು ಹೇಳುತ್ತಿದ್ದಾರೆ. ನೀವು ರಾತ್ರಿ 7ರ ನಂತರ ಯಾರಿಗೂ ಸಿಗದೆ ಕೇವಲ ಇಬ್ಬರು ಮಂತ್ರಿಗಳ ಜತೆ ಇರುತ್ತೀರಿ ಎಂದು ಮಾತನಾಡುತ್ತಿದ್ದಾರೆ. ಈ ಬಗ್ಗೆ ಜನಗಳಿಗೆ ಮಾಹಿತಿ ನೀಡಿ’ ಎಂದು ಶಿವಕುಮಾರ್ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದರು.

‘ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಬೇಡಿಕೆ ಇದೆ. ಕಾಂಗ್ರೆಸ್ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರಲಿದೆ ಎಂಬ ನಂಬಿಕೆ ಇದೆ ಎಂಬುದು ಇದರಲ್ಲೇ ಗೊತ್ತಾಗುತ್ತದೆ. ನಾವು ಟಿಕೆಟ್ ಆಕಾಂಕ್ಷಿಗಳಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಪಕ್ಷ ಹೇಳಿದಂತೆ ಕೇಳುತ್ತೇವೆ’ ಎಂದು ಶಿವಕುಮಾರ್ ನುಡಿದರು.


-

Similar News