×
Ad

ಶಿಕ್ಷಕರ ವರ್ಗಾವಣೆ ನೀತಿಯ ಕರಡು ಅಧಿಸೂಚನೆ ಪ್ರಕಟ

ಒಮ್ಮೆ ವರ್ಗಾವಣೆಯಾದ ಬಳಿಕ ಮತ್ತೆ 3 ವರ್ಷ ಅರ್ಜಿ ಸಲ್ಲಿಸುವಂತಿಲ್ಲ

Update: 2022-11-16 21:35 IST

ಬೆಂಗಳೂರು, ನ. 16: ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ-2020ಕ್ಕೆ ತಿದ್ದುಪಡಿ ಮಾಡಿ, ಶಿಕ್ಷಕರ ವರ್ಗಾವಣೆಯನ್ನು ಶಿಕ್ಷಕ ಸ್ನೇಹಿಯಾಗಿ ರೂಪಿಸಲಾಗಿದೆ. ಈ ಮೂಲಕ ವರ್ಗಾವಣೆಗೆ ಈ ಹಿಂದೆ ವಿಧಿಸಿದ್ದ ನಿರ್ಬಂಧಗಳನ್ನು ರದ್ದುಪಡಿಸಲಾಗಿದೆ. 

ಶಿಕ್ಷಕರು ಹಲವು ವರ್ಷಗಳಿಂದ ಸಲ್ಲಿಸಿದ ಬೇಡಿಕೆಯನ್ನು ಆಧರಿಸಿ ಶಿಕ್ಷಕರ ವರ್ಗಾವಣೆ ಕಾಯಿದೆಯಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಇದರಲ್ಲಿ ಪರಸ್ಪರ ವರ್ಗಾವಣೆಗೆ ಒಂದು ಬಾರಿ ಮಾತ್ರ ಅವಕಾಶ ಎಂಬ ಮಿತಿಯನ್ನು ತೆಗೆದು ಹಾಕಲಾಗಿದೆ. ಹಲವು ವರ್ಷಗಳ ಬೇಡಿಕೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ, ಮಲೆನಾಡು ಹಾಗೂ ಡಾ. ನಂಜುಂಡಪ್ಪ ವರದಿಯ ಅನ್ವಯ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿರುವ ತಾಲೂಕುಗಳಿಗೆ ಹೋಗಬಯಸುವವರಿಗೆ ಆದ್ಯತೆ ನೀಡಲಾಗಿದೆ. 

ಪತಿ-ಪತ್ನಿಯರಿಗೆ ಸಂಬಂಧಿಸಿದಂತೆ ಶೈಕ್ಷಣಿಕ ತಾಲೂಕಿನಲ್ಲಿ ಹುದ್ದೆ ಖಾಲಿ ಇಲ್ಲದಿದ್ದರೆ, ಆ ಜಿಲ್ಲೆಯ ಬೇರೆ ತಾಲೂಕಿನಲ್ಲೂ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಯಾವುದೇ ಒಂದು ಘಟಕ ಹಾಗೂ ವೃಂದದಲ್ಲಿ ಕನಿಷ್ಠ 10 ವರ್ಷ ಅಥವಾ ಎಲ್ಲ ವೃಂದಗಳೂ ಸೇರಿ 15 ವರ್ಷ ಕೆಲಸ ಮಾಡಿದ ಶಿಕ್ಷಕರನ್ನು ಶೇ.25ರಷ್ಟು ಮಿತಿಯ ಒಳಗೆ ಖಾಲಿ ಹುದ್ದೆಗಳಿರುವ ತಾಲೂಕಿಗೆ ವರ್ಗಾವಣೆ ಮಾಡಲು ಅವಕಾಶ ಇರುತ್ತದೆ.

ಹಿಂದೆ ಪರಸ್ಪರ ವರ್ಗಾವಣೆಗೆ ಒಂದು ಬಾರಿ ಮಾತ್ರ ಅವಕಾಶವಿದ್ದು, ಈಗ ಆ ನಿರ್ಬಂಧ ಇರುವುದಿಲ್ಲ. ಕೆಲಸಕ್ಕೆ ಸೇರಿದ ಮೊದಲ ಐದು ವರ್ಷ ಹಾಗೂ ನಿವೃತ್ತಿಗೆ ಮೊದಲಿನ ಐದು ವರ್ಷ ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಒಮ್ಮೆ ವರ್ಗಾವಣೆಯಾದ ಬಳಿಕ ಮತ್ತೆ ಮೂರು ವರ್ಷ ಅರ್ಜಿ ಸಲ್ಲಿಸುವಂತಿಲ್ಲ. ತಿದ್ದುಪಡಿ ಕುರಿತು ಸಂಪುಟ ಸಭೆಯ ಅನುಮೋದನೆ ಪಡೆಯಲಾಗಿತ್ತು. ಅಧಿವೇಶನದಲ್ಲೂ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿತ್ತು. ಇದೀಗ ಸರಕಾರವು ಕರಡು ಅಧಿಸೂಚನೆ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ.

Similar News