ನಾನು ಅಭಿವೃದ್ಧಿಗಾಗಿ ರಾಜಕಾರಣ ಮಾಡುತ್ತಿದ್ದೇನೆ, ರಾಮದಾಸ್‌ ಗೆ ಕಿರುಕುಳ ಕೊಡುವ ಶಕ್ತಿ ನನಗೆ ಇಲ್ಲ: ಪ್ರತಾಪ್ ಸಿಂಹ

Update: 2022-11-17 11:04 GMT

ಬೆಂಗಳೂರು: 'ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮೈಸೂರಿಗೆ ಬಂದಿದ್ದಾಗ ಅವರ ಬೆನ್ನು ತಟ್ಟಿದ್ದರು. ಅವರಿಗೆ ಕಿರುಕುಳ ಕೊಡುವ ಶಕ್ತಿ ನನಗೆ ಇಲ್ಲ' ಎಂದು ಬಿಜೆಪಿ ಪಕ್ಷದಲ್ಲಿ ಕೆಲವರಿಗೆ ಕಿರುಕುಳ ನೀಡಲಾಗಿದೆ ಎಂಬ ಶಾಸಕ ರಾಮದಾಸ್ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. 

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ''ರಾಮದಾಸ್ ಅವರ ಬಳಿಯಿರುವ ಹಣದಿಂದ ನನ್ನನ್ನು ಸುಟ್ಟು ಹಾಕಬಹುದು. ಅವರಿಗೆ ಕಿರುಕುಳ ಕೊಡುವಷ್ಟು ನಾವು ದೊಡ್ಡವರಾಗಿ ಬೆಳೆದಿಲ್ಲ. ಅವರು ಯಾವ ಕಾರಣಕ್ಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ಬಸ್ ನಿಲ್ದಾಣದ ಗೋಪುರ ಗುಂಬಜ್ ರೀತಿ ಕಾಣುತ್ತಿದೆ, ಇದನ್ನು ಕೆಡವಿದರೆ ಟಿಪ್ಪು ಅನುಯಾಯಿಗಳಿಗೆ ಅನ್ಯಾಹವಾಗಬಹುದು, ಶಿವಾಜಿ ಮಹಾರಾಜರ ಅನುಯಾಯಿಗಳಿಗಲ್ಲ. ರಾಮದಾಸ್ ಅವರು 29 ವರ್ಷದ ಹಿಂದೆ ಪಕ್ಷದ ಶಾಸಕರಾದವರು. ಅಯೋಧ್ಯೆಯಲ್ಲಿ ಗುಂಬಜ್ ಬಿದ್ದ ಮೇಲೆ ರಾಮದಾಸ್ ಅವರು ಪಕ್ಷ ಸೇರಿದರು. ಹೀಗಾಗಿ ಗುಂಬಜ್ ಮಾದರಿ ಬಸ್ ಶೆಲ್ಟರ್ ತೆರವಿನಿಂದ ಅವರಿಗೆ ನೋವಾಗುತ್ತದೆ ಎಂಬುದನ್ನು ನಂಬಲಾರೆ'' ಎಂದು ಹೇಳಿದ್ದಾರೆ. 

''30 ವರ್ಷಗಳ ಕಾಲದಲ್ಲಿ ಕಿರುಕುಳದಿಂದಾಗಿ 10 ಜನ ಬೇರೆ ಪಕ್ಷಕ್ಕೆ ಹೊರಟು ಹೋದರು. ನಾನೊಬ್ಬ ಇದ್ದೀನಿ, ನನ್ನನ್ನು ಬಿಟ್ಟು ಬಿಡಿ'' ಎಂದು ಎಂದು ಮಾಧ್ಯಮಗಳ ಮುಂದೆ ಶಾಸಕ ರಾಮದಾಸ್ ಕಣ್ಣೀರು ಹಾಕಿದ್ದರು.

Similar News