ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಜಾಗದ ಕುರಿತಂತೆ ಸರ್ವೇ ನಡೆಸಲು ಕೋರಿ ಹೈಕೋರ್ಟ್ ಗೆ ಪಿಐಎಲ್

Update: 2022-11-17 13:06 GMT

ಬೆಂಗಳೂರು, ನ.17: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ಜಾಗದ ವಿವಾದದ ಬಗ್ಗೆ ಪುರಾತತ್ವ ಇಲಾಖೆಯಿಂದ ಅಧ್ಯಯನ, ಸರ್ವೇ ಹಾಗೂ ಉತ್ಖನನ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲು ಕೋರಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಜಾಮಿಯಾ ಮಸೀದಿ ತೆರವಿಗೆ ಕೋರಿ ಬಜರಂಗ ಸೇನೆ ಕಾರ್ಯಕರ್ತರು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಮುಜರಾಯಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಮಂಡ್ಯ ಜಿಲ್ಲಾಧಿಕಾರಿ, ರಾಜ್ಯ ಧಾರ್ಮಿಕ ಪರಿಷತ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. 

ಜಾಮಿಯಾ ಮಸೀದಿಯು ಒಂದು ಕಾಲದಲ್ಲಿ ಆಂಜನೇಯ ದೇವಾಲಯವಾಗಿತ್ತು ಎಂಬುದಕ್ಕೆ ಪುರಾವೆಗಳಿವೆ. ಹೀಗಾಗಿ, ಮಸೀದಿಯನ್ನು ಕೂಡಲೇ ತೆರವುಗೊಳಿಸಬೇಕು. ಮಸೀದಿಯ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಹಿಂದೂ ಭಕ್ತರಿಗೆ ಸ್ನಾನ ಮಾಡಲು ಅವಕಾಶ ನೀಡಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಮೈಸೂರು ಗೆಜೆಟಿಯರ್, ಮಸೀದಿಯಲ್ಲಿನ ಹಿಂದೂ ವಾಸ್ತುಶಿಲ್ಪ, ಹಿಂದೂ ವಿಗ್ರಹಗಳ ಶಾಸನ, ಪವಿತ್ರ ಜಲಮೂಲ ಮತ್ತು ಬ್ರಿಟಿಷ್ ಅಧಿಕಾರಿಗಳ ಉಲ್ಲೇಖಗಳನ್ನು ನ್ಯಾಯಾಲಯಕ್ಕೆ ಬಜರಂಗ ಸೇನೆ ಕಾರ್ಯಕರ್ತರು ಪುರಾವೆ ನೀಡಿದ್ದಾರೆನ್ನಲಾಗಿದೆ. 

ಜಾಮಿಯಾ ಮಸೀದಿಯನ್ನು ಮಸ್ಜಿದ್-ಇ-ಆಲಾ ಎಂದೂ ಕರೆಯುತ್ತಾರೆ, ಇದು ಶ್ರೀರಂಗಪಟ್ಟಣ ಕೋಟೆಯೊಳಗೆ ಇದೆ. ಇದನ್ನು 1786-87 ರಲ್ಲಿ ಟಿಪ್ಪು ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಮಸೀದಿಯು ಪ್ರವಾದಿ ಮೊಹಮ್ಮದ್ ಅವರ ಒಂಬತ್ತು ಹೆಸರುಗಳನ್ನು ಉಲ್ಲೇಖಿಸುವ ಮೂರು ಶಾಸನಗಳನ್ನು ಹೊಂದಿದೆ.

Similar News