×
Ad

ರಾಜಕೀಯ ಬಿಟ್ಟರೂ, ಮಂಡ್ಯ ಬಿಡುವುದಿಲ್ಲ: ಸಂಸದೆ ಸುಮಲತಾ

''ನನ್ನನ್ನು ಎಲ್ಲ ಪಕ್ಷದವರು ಬೆಂಬಲಿಸಿದ್ದಾರೆ...''

Update: 2022-11-17 19:23 IST

ಮಂಡ್ಯ, ನ.17: ''ನಾನು ಹೊಸ ಕ್ಷೇತ್ರ ಹುಡುಕುತ್ತಿದ್ದೇನೆ ಎಂದು ಯಾರೋ ಕನಸು ಕಾಣುತ್ತಿರಬಹುದು. ನನಗೆ ಹೊಸ ಕ್ಷೇತ್ರದ ಅವಶ್ಯಕತೆ ಇಲ್ಲ. ರಾಜಕೀಯಕ್ಕೆ ಬಂದಿರೋದೆ ಮಂಡ್ಯಕ್ಕಾಗಿ, ಬೇಕಾದರೆ ರಾಜಕೀಯ ಬಿಡುತ್ತೇನೆ, ಆದರೆ, ಮಂಡ್ಯ ಬಿಡುವುದಿಲ್ಲ'' ಎಂದು ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ.

ಮದ್ದೂರು ಪ್ರವಾಸಿಮಂದಿರಲ್ಲಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ''ನಾನು ವಿಧಾನಸಭೆ ಚುನಾವಣೆಗೆ ನಿಲ್ಲುವುದಿಲ್ಲ. ನನ್ನನ್ನು ಎಲ್ಲ ಪಕ್ಷದವರು ಬೆಂಬಲಿಸಿದ್ದಾರೆ. ಹಾಗಾಗಿ ಇದುವರೆಗೂ ಚುನಾವಣೆಯಲ್ಲಿ ಯಾರಿಗೂ ಬೆಂಬಲ ನೀಡಿಲ್ಲ'' ಎಂದು ಅವರು ಹೇಳಿದರು.

''ನನ್ನ ಮಗ ಅಭಿಷೇಕ್ ಚಿತ್ರರಂಗದಲ್ಲಿ ಸಕ್ರಿಯನಾಗಿದ್ದಾನೆ. ರಾಜಕೀಯಕ್ಕೆ ನಾನೇನು ಆಹ್ವಾನಿಸಿಲ್ಲ. ರಾಜಕೀಯಕ್ಕೆ ಬರುವುದು, ಬಿಡುವುದು ಅವನಿಗೆ ಬಿಟ್ಟ ವಿಚಾರ. ಸದ್ಯಕ್ಕೆ ಆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ'' ಎಂದೂ ಅವರು ಸ್ಪಷ್ಟಪಡಿಸಿದರು.

''ನರೇಗಾದಲ್ಲಿ ಮಂಡ್ಯ ಜಿಲ್ಲೆ ಕಳಪೆ ಸಾಧನೆ ವರದಿ ನೋಡಿ ಬೇಸರವಾಯಿತು. ಇದಕ್ಕೆ ನಾನು ಜವಾಬ್ದಾರಳಲ್ಲ. ದಿಶಾ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸಿದ್ದೇನೆ. ಆದರೂ, ಈ ರೀತಿ ಆಗಿದೆ.  ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸುತ್ತೇನೆ'' ಎಂದು ಅವರು ಹೇಳಿದರು.

ಕಬ್ಬು ದರ ನಿಗದಿಗೆ ಒತ್ತಾಯ; ರೈತರ ಧರಣಿಗೆ ಸುಮಲತಾ ಬೆಂಬಲ 

ರೈತರ ಹೋರಾಟವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಕಬ್ಬಿಗೆ ನ್ಯಾಯಯುತ ದರ ನಿಗದಿಪಡಿಸಬೇಕು ಎಂದು ಸಂಸದೆ ಸುಮಲತಾ ಅಂಬರೀಷ್ ಒತ್ತಾಯಿಸಿದ್ದಾರೆ.

ಕಬ್ಬು ದರ ನಿಗದಿಗೆ ಹನ್ನೊಂದು ದಿನದಿಂದ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಗುರುವಾರ ಬೆಂಬಲ ನೀಡಿ ಮಾತನಾಡಿದ ಅವರು, ಈ ವಿಚಾರದಲ್ಲಿ ಸರಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Similar News