‘ಶ್ರೀಗಂಧ ನೀತಿ-2022’ ಜಾರಿಗೆ ಸಚಿವ ಸಂಪುಟ ಅನುಮೋದನೆ

ರೈತರು ಮುಕ್ತ ಮಾರುಕಟ್ಟೆಯಲ್ಲಿ ಶ್ರೀಗಂಧ ಮಾರಾಟ ಮಾಡಲು ಅವಕಾಶ ► ತಂತ್ರಜ್ಞಾನದ ಮೂಲಕ ಶ್ರೀಗಂಧದ ಮರಗಳ ರಕ್ಷಣೆ

Update: 2022-11-17 15:23 GMT

ಬೆಂಗಳೂರು, ನ.17: ರೈತರು ತಮ್ಮ ಖಾಸಗಿ ಜಮೀನುಗಳಲ್ಲಿ ಶ್ರೀಗಂಧ ಬೆಳೆದು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುವಾಗುವಂತೆ 2022-23ನೆ ಸಾಲಿನ ಬಜೆಟ್‍ನಲ್ಲಿ ಮುಖ್ಯಮಂತ್ರಿ ಘೋಷಿಸಿರುವಂತೆ ರಾಜ್ಯ ಸಚಿವ ಸಂಪುಟವು ‘ಶ್ರೀಗಂಧ ನೀತಿ-2022’ ಜಾರಿಗೆ ಅನುಮೋದನೆ ನೀಡಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ದೇಶಿಯ ಹಾಗೂ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಶ್ರೀಗಂಧಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಆದುದರಿಂದ, ರೈತರು ತಮ್ಮ ಖಾಸಗಿ ಜಮೀನುಗಳಲ್ಲಿ ಶ್ರೀಗಂಧ ಬೆಳೆದು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲು ‘ಶ್ರೀಗಂಧ ನೀತಿ-2022’ ಅನ್ನು ಜಾರಿಗೆ ತರಲಾಗಿದೆ ಎಂದರು.

ಶ್ರೀಗಂಧ ಬೆಳೆಯುವ ಕುರಿತು ಮಾರ್ಗದರ್ಶನ ನೀಡುವುದರ ಜೊತೆಗೆ, ಶ್ರೀಗಂಧದ ಮರಗಳ ಕಳವು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ತಂತ್ರಜ್ಞಾನ ಅಳವಡಿಸಿಕೊಂಡು(ಮರಗಳಿಗೆ ಚಿಪ್ ಅಳವಡಿಕೆ) ಶ್ರೀಗಂಧದ ಮರಗಳಿಗೆ ರಕ್ಷಣೆ ಒದಗಿಸಲಾಗುವುದು. ರಾಜ್ಯ ಸರಕಾರದ ಸಾಬೂನು ಮಾರ್ಜಕ ನಿಗಮಕ್ಕೆ ಅಗತ್ಯವಿರುವಷ್ಟು ಶ್ರೀಗಂಧ ನಮ್ಮಲ್ಲಿ ಸಿಗುತ್ತಿಲ್ಲ. ಆಸ್ಟ್ರೇಲಿಯದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೂ ಶ್ರಿಗಂಧದ ಅಗತ್ಯವಿದೆ. ಈ ನೂತನ ನೀತಿಯಿಂದಾಗಿ ರೈತರ ಆದಾಯವು ಹೆಚ್ಚಳವಾಗಲಿದೆ ಎಂದು ಸುಧಾಕರ್ ವಿವರಿಸಿದರು.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ  ಕೌಜಲಗಿ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ, ಉತ್ತರಕನ್ನಡ ಜಿಲ್ಲೆಯ ಕುಮುಟ ತಾಲೂಕು, ಗೋಕರ್ಣ, ಯಾದಗಿರಿ ಜಿಲ್ಲೆಯ ಶೋರಾಪುರ ತಾಲೂಕುಕಿನ ಕಕ್ಕೇರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾದರಿ ಸಮುದಾಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿ ಜು.27ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಆಯುಷ್ಮಾನ್  ಭಾರತ ಅರೋಗ್ಯ ಮೂಲಸೌಕರ್ಯ ಅಭಿಯಾನ ಯೋಜನೆಯಡಿ ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ಸಾಮಥ್ರ್ಯದ ಕ್ರಿಟಿಕಲ್ ಕೇರ್ ಬ್ಲಾಕ್ ಅನ್ನು 56 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 15ನೆ ಹಣಕಾಸು ಆಯೋಗದ ಅನುದಾನದಲ್ಲಿ 154.63 ಕೋಟಿ ರೂ.ಗಳ ವೆಚ್ಚದಲ್ಲಿ 2022-23ನೇ ಸಾಲಿಗೆ ಉಪ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಗ ಪತ್ತೆ ಉಪಕರಣ, ರಾಸಾಯನಿಕ ಮತ್ತು ರೋಗ ಪತ್ತೆ ಕಿಟ್‍ಗಳನ್ನು ಖರೀದಿಸಲು ಹಾಗೂ ಪ್ರಯೋಗಾಲಯ ಪರೀಕ್ಷೆಗಳ ಮಾದರಿಯನ್ನು ಹತ್ತಿರದ ಹಬ್ ಪ್ರಯೋಗಾಲಯಗಳಿಗೆ ಸಾಗಣೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಸುಧಾಕರ್ ತಿಳಿಸಿದರು.

2022-23ನೇ ಸಾಲಿನ ರಾಷ್ಟ್ರೀಯ ಅರೋಗ್ಯ ಅಭಿಯಾನದ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಕೋಲಾರ, ಚಿಕ್ಕಮಗಳೂರು, ರಾಯಚೂರು, ದಾವಣಗೆರೆ, ಬಾಗಲಕೋಟೆ ಜಿಲ್ಲೆಗಳಲ್ಲಿ ನೂತನ 5 ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಹಾಗೂ ಬೆಳಗಾವಿ ಮತ್ತು ದಾವಣಗೆರೆಯಲ್ಲಿ 2 ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ 158  ಕೋಟಿ ರೂ.ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ಟ್ರಾಮಾಕೇರ್ ಸೆಂಟರ್ ನಿರ್ಮಾಣ ಕಾಮಗಾರಿಯನ್ನು 35 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸರಕಾರಿ ನರ್ಸಿಂಗ್ ಕಾಲೇಜು ಮತ್ತು ನರ್ಸಿಂಗ್ ಹಾಸ್ಟೆಲ್ ಕಟ್ಟಡವನ್ನು 20 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿನ ಆಸ್ಪತ್ರೆಗಳು, ಚಿಕಿತ್ಸಾಲಯಗಳು, ರೋಗ ಪತ್ತೆ ಹಚ್ಚುವ ಕೇಂದ್ರಗಳಿಗೆ ವೈದ್ಯಕೀಯ ಉಪಕರಣಗಳನ್ನು 44 ಕೋಟಿ ರೂ.ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ವಿವಿಧ ಜಿಲ್ಲೆಗಳಲ್ಲಿ 600 ಕೋಟಿ ರೂ.ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ಸುಧಾಕರ್ ತಿಳಿಸಿದರು.

ಮೈಸೂರು ಜಿಲ್ಲೆಯ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ವಿಐಪಿ ಅತಿಥಿ ಗೃಹ, ಭಕ್ತಾದಿಗಳಿಗೆ ಕೊಠಡಿಗಳು, ಡಾರ್ಮೆಟರಿ ಕಟ್ಟಡದ ನಿರ್ಮಾಣದ 16.52 ಕೋಟಿ ರೂ.ಗಳ ಅಂದಾಜು ವೆಚ್ಚದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣ ಪಂಚಾಯಿತಿಯ ವ್ಯಾಪ್ತಿಗೆ ಸಹಸ್ರಹಳ್ಳಿಯ ಭಾಗಶಃ ಕಂದಾಯ ಗ್ರಾಮ ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

38 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 397 ಕೋಟಿ ರೂ.ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ 12 ಕೋಟಿ ರೂ.ಅಂದಾಜು ಮೊತ್ತದಲ್ಲಿ ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಗೆ 47.50 ಕೋಟಿ ರೂ.ಪರಿಷ್ಕತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಗಂಗೊಂಡನಹಳ್ಳಿಯ ಸರ್ವೆ ನಂ.18ರಲ್ಲಿ 15 ಗುಂಟೆ ಗೋಮಾಳ ಜಮೀನನ್ನು ‘ನಮ್ಮನೆ ಸುಮ್ಮನೆ ನಿರಾಶ್ರಿತರ ಆಶ್ರಮ’ಕ್ಕೆ ಮಂಜೂರು ಮಾಡಲು ಅನುಮೋದನೆ ನೀಡಲಾಗಿದೆ ಎಂದು ಸುಧಾಕರ್ ತಿಳಿಸಿದರು.

► ರಾಜೀವ್‍ಗಾಂಧಿ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಅನುಮೋದನೆ

ರಾಮನಗರದ ಅರ್ಚಕರಹಳ್ಳಿಯಲ್ಲಿ ರಾಜೀವ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಯಾಂಪಸ್ ಹಾಗೂ ಇತರ ಪೂರಕ ಕಟ್ಟಡಗಳನ್ನು 600 ಕೋಟಿ ರೂ.ವೆಚ್ಚದಲ್ಲಿ ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ವಿಭಾಗದಿಂದ ನಿರ್ಮಿಸಲು ಆಡಳಿತಾತ್ಮಕ ಅನುಮೊದನೆ ನೀಡಲಾಗಿದೆ ಎಂದು ಸುಧಾಕರ್ ತಿಳಿಸಿದರು.

ರಾಜ್ಯ ಸರಕಾರದ ಎಲ್ಲ ಇಲಾಖೆಗಳಲ್ಲಿ ಸಿ ಮತ್ತು ಡಿ ಗ್ರೂಪ್ ನೌಕರರ ವರ್ಗಾವಣೆಯ ಸಾಮಾನ್ಯ ನಿಯಮಗಳಲ್ಲಿ ಬದಲಾವಣೆ ತಂದು, 7 ವರ್ಷಗಳ ನಂತರ ಪತಿ, ಪತ್ನಿ ಪ್ರಕರಣಗಳಲ್ಲಿ ಮಾತ್ರ ಅವರಿಗೆ ಅಂತರ್‍ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಗೃಹ ಇಲಾಖೆಯಲ್ಲಿ 7 ವರ್ಷವಾದರೂ ಪತಿ, ಪತ್ನಿ ಪ್ರಕರಣಗಳಲ್ಲಿ ವರ್ಗಾವಣೆಗೆ ಅವಕಾಶ ಇರಲಿಲ್ಲ. ಈ ನಿರ್ಧಾರದಿಂದ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ಅನುಕೂಲವಾಗಲಿದೆ

-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

Similar News