ಟಿಪ್ಪು ದೇವಸ್ಥಾನ ಒಡೆದಿರುವ ಬಗ್ಗೆ ಚರ್ಚೆಗೆ ಬನ್ನಿ: ಪ್ರೊ.ನಂಜರಾಜ ಅರಸ್ ಸವಾಲು

'ಟಿಪ್ಪು ನಿಜಕನಸುಗಳು' ನಾಟಕ ಕೃತಿ ವಿರುದ್ಧ ದಸಂಸ ಸೇರಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ► ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಜಾಕ್ಕೆ ಒತ್ತಾಯ

Update: 2022-11-17 16:07 GMT

ಮೈಸೂರು,ನ.17: ''ಅಪ್ಪಟ ದೇಶಪ್ರೇಮಿ ಟಿಪ್ಪು ಸುಲ್ತಾನ್ ಕುರಿತು ಅವಹೇಳನಾಕಾರಿಯಾಗಿ ಬಿಂಬಿಸಿರುವ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರ ಟಿಪ್ಪು ನಿಜಕನಸುಗಳು ನಾಟಕ ಕೃತಿಯನ್ನು ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು'' ಎಂದು ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು,  ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ರಂಗಾಯಣ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿ ಅವರ ವಿರುದ್ಧ  ಕ್ರಮಿನಿಲ್ ಮೊಕದ್ದಮ್ಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸ್ ಮಾತನಾಡಿ, ''ವಾಟ್ಸ್ ಅಪ್ ಸುಳ್ಳುಗಳನ್ನು ಅಧಿಕೃತ ದಾಖಲೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ನಾಟಕ ಮಾಡಲು ಹೊರಟಿದ್ದಾರೆ.  ಟಿಪ್ಪು ಯಾವ ಹಿಂದೂ ದೇವಸ್ಥಾನ ಒಡೆದಿದ್ದ ಎಂಬುದರ ಬಗ್ಗೆ ಚರ್ಚೆಗೆ ಬರಲಿ'' ಎಂದು ಸವಾಲು ಹಾಕಿದರು.

''ಟಿಪ್ಪು ಸುಲ್ತಾನ್ ಎಲ್ಲಾ ಹಿಂದೂ ದೇವಾಲಯಗಳಿಗೆ ರಕ್ಷಣೆ ಕೊಟ್ಟು ಆ ದೇವಾಲಯಗಳಿಗೆ ದಾನ ಮಾಡಿದ್ದಾನೆ. ಇದಕ್ಕೆ ನಮ್ಮಲ್ಲಿ ಅಧಿಕೃತ ದಾಖಲೆಗಳಿವೆ. ಆದರೆ ಆರೆಸ್ಸೆಸ್ ನವರು ಒಂದು ಸುಳ್ಳನ್ನು ನೂರು ಜನರ ಬಾಯಲ್ಲಿ ಹೇಳಿಸಿ ಸತ್ಯ ಎಂದು ಹೇಳಲು ಹೊರಟಿದ್ದಾರೆ. ಹಾಗಾಗಿ ಟಿಪ್ಪು ನಿಜಕನಸುಗಳು ನಾಟಕನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು'' ಎಂದು ಒತ್ತಾಯಿಸಿದರು.

''ಮೈಸೂರ ಮಹಾರಾಜರು ಹಿಂದೂ,ಮುಸ್ಲಿಮ್, ಜೈನ, ಕ್ರಿಶ್ಚಿಯನ್ ಸೇರಿದಂತೆ ಎಲ್ಲರನ್ನೂ ಒಂದೇ ಎಂಬ ಬಾವನೆಯಲ್ಲ ನೋಡುತ್ತಿದ್ದರು. ಅಂದಿನ ಮೈಸೂರು ಒಡೆಯರ್ ಅವರು ಮುಸ್ಲಿಮರಿಗೆ ಸಾಕಷ್ಟು ಬೆಂಬಲ ನೀಡಿದ್ದರು. ಹಾಗಾಗಿಯೇ ಅವರು ಮಿರ್ಜಾ ಇಸ್ಮಾಯಿಲ್ ಅವರನ್ನು ದಿವಾನರನ್ನಾಗಿ ನೇಮಕ ಮಾಡಿಕೊಂಡಿದ್ದರು. ಮೈಸೂರಿನ ಲಲಿತ್ ಮಹಲ್ ಬಳಿ ಆಶ್ವದಳ ದ ಕ್ಯಾಂಪ್ ಮಾಡಲಾಗಿತ್ತು. ಅಲ್ಲಿ ಹಿಂದೂ ಅಲ್ಲದೆ ಬಹಳಷ್ಟು ಮಂದಿ ಮುಸ್ಲಿಮ್ ಸೈನಿಕರಿದ್ದರು. ಆ ಜಾಗದಲ್ಲಿ ಬರೀ ಹಿಂದೂ ದೇವಸ್ಥಾನ ಇತ್ತು. ಆಗ ಇದೇ ಮೈಸೂರಿನ ಒಡೆಯರ್ ಅವರು ಮುಸ್ಲಿಮರ ಪ್ರಾರ್ಥನೆಗಾಗಿ ಮಸೀದಿಯನ್ನು ಕಟ್ಟಿಸಿಕೊಟ್ಟರು. ಈಗಲೂ ಆ ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡುತ್ತಿದ್ದಾರೆ. ಬೇಕಾದರೆ ಸುಳ್ಳುಗಳನ್ನೇ ಭಿತ್ತರಿಸುತ್ತಿರುವ ಅಡ್ಡಂಡ ಸಿ.ಕಾರ್ಯಪ್ಪ ಹೋಗಿ ನೋಡಿಕೊಂಡು ಬರಲಿ'' ಎಂದು ಕುಟುಕಿದರು.

''ಟಿಪ್ಪು ಶೃಂಗೇರಿ ಮಠಕ್ಕೆ ರಕ್ಷಣೆ ಕೊಟ್ಟಿದ್ದು ದಾಖಲೆಗಳಲ್ಲಿ ಇವೆ. ಮಠಕ್ಕೆ ಸಾಕಷ್ಟು ಹಣವನ್ನು ನೀಡಿ ಮಠವನ್ನು ಪುನರ್ ಜೀರ್ಣಗೊಳಿಸುವ ಕೆಲಸವನ್ನು ಮಾಡಿದ್ದಾನೆ. ಹಾಗಾಗಿಯೇ ಸಹಾಯ ಮಾಡಿದವರನ್ನು ನೆನೆಯಲು ಶೃಂಗೇರಿ ಮಠದಲ್ಲಿ ಇಂದಿಗೂ ಟಿಪ್ಪು ಹೆಸರಿನಲ್ಲಿ ಸಲಾಂ ಆರತಿ ನಡೆಯುತ್ತಿದೆ'' ಎಂದು ಹೇಳಿದರು.

''ಆರೆಸ್ಸೆಸ್ ನವರು ಸುಳ್ಳುಗಳನ್ನು ಹೇಳಿ ಹಿಂದೂ ಮತಗಳನ್ನು ಕೇಂದ್ರಿಕರಿಸಲು  ಬಹಳಷ್ಟು ಪ್ರಯತ್ನವನ್ನು ಪಡುತ್ತಿದ್ದಾರೆ.  ಹಿಂದೂ ಮುಸ್ಲಿಮರ ನಡುವೆ ದ್ವೇಷ ಎತ್ತಿಕಟ್ಟಿ ಚುನಾವಣಾ ಗಿಮಿಕ್ ಮಾಡುತ್ತಿದ್ದಾರೆ. ಇದು ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಹಾಗಾಗಿ ಕೂಡಲೇ ಈ ನಾಟಕವನ್ನು ನಿಲ್ಲಿಸಬೇಕು'' ಎಂದು ಒತ್ತಾಯಿಸಿದರು.

''ಟಿಪ್ಪು ನಿಜಕನಸಗಳು ನಾಟಕ ಪ್ರದರ್ಶನಗೊಂಡರೆ ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಲಿದೆ. ಧರ್ಮದ ಕಿಚ್ಚು ಹತ್ತಿಕೊಳ್ಳುತ್ತದೆ. ಹಾಗಾಗಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರು ಈ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬಾರದು. ಈ ನಾಟಕದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು'' ಎಂದು ಹೇಳಿದರು.

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಶಿವರಾಜು ಅರಸಿಕೆರೆ, ಎಸ್.ಡಿ.ಪಿ.ಐ ನ ದೇವನೂರು ಪುಟ್ಟನಂಜಯ್ಯ, ಅಬ್ದುಲ್ ಖಾನ್,  ರಫತ್ ಖಾನ್, ಪ್ರಭುಸ್ವಾಮಿ ಡಿ. ಹಗಿನವಾಳು,  ಪುಟ್ಟಣ್ಣ, ಭಾಗ್ಯಮ್ಮ, ಸೋಮನಾಯ್ಕ. ಮಹೇಶ್, ಕುಮಾರ್, ಸೇರಿದಂತೆ ಹಲವರು ಭಾಗವಹಿಸಿದ್ದರು.

Similar News