ಮೈಸೂರು: ಜನರಲ್ಲಿ ಆತಂಕ ಸೃಷ್ಟಿಸಿದ್ದ ಮೊಸಳೆ ಕೊನೆಗೂ ಸೆರೆ

Update: 2022-11-17 16:53 GMT

ಮೈಸೂರು,ನ.17: ಮೈಸೂರು ನಗರದ ಜೆಎಸ್‍ಎಸ್ ಆಸ್ಪತ್ರೆ ಹಿಂಭಾಗದಲ್ಲಿರುವ ಎಲೆ ತೋಟದ ರಾಜಕಾಲುವೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೊಸಳೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.

ಗುರುವಾರ ಬೆಳಿಗ್ಗೆ ಜೆಸಿಬಿ ಬಳಸಿ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ, ಸಂಜೆ ವೇಳೆಗೆ ಮೊಸಳೆಯನ್ನು ಹಿಡಿಯಲು ಯಶಸ್ವಿಯಾಗಿದೆ. ಇದರೊಂದಿಗೆ ಕಳೆದ ಒಂದು ತಿಂಗಳಿನಿಂದ ಎಲೆ ತೋಟದ ನಿವಾಸಿಗಳಲ್ಲಿ ಉಂಟಾಗಿದ್ದ ಆತಂಕ ದೂರವಾಗಿದೆ.

ನಗರದ ರಾಮಾನುಜ ರಸ್ತೆ ಒಂಬತ್ತನೇ ಕ್ರಾಸ್ ರಸ್ತೆಯಲ್ಲಿ ರವಿವಾರ ಈ ಮೊಸಳೆ ಕರುವೊಂದನ್ನು ಬಲಿ ತೆಗೆದುಕೊಂಡಿತ್ತು.  ಬಳಿಕ ಕೆರೆ ಸೇರಿಕೊಂಡಿದ್ದ ಮೊಸಳೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ನಡಸಿದ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆರ್.ಎಫ್.ಓ ಸುರೇಂದ್ರ, ಡಿ.ಆರ್.ಎಫ್.ಓ ವೆಂಕಟಾಚಲ ಹಾಗೂ ಸಿಬ್ಬಂದಿ ಸೇರಿ ಒಟ್ಟು 6 ಜನ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಸ್ಥಳೀಯರು  ಕಾರ್ಯಾಚರಣೆಯಲ್ಲಿ ನೆರವು ನೀಡಿದ್ದರು ಎಂದು ತಿಳಿದು ಬಂದಿದೆ.

ಸೋಮವಾರ ರಾಜ ಕಾಲುವೆಯ ಕೊಳಚೆ ನೀರಿನಲ್ಲಿ ಕಾಣಿಸಿಕೊಂಡ ಮೊಸಳೆ ಇದೇ ಜಾಗದಲ್ಲಿ ಪದೇ ಪದೇ ಕಾಣಿಸಿಕೊಂಡಿತ್ತು. ಆದರೆ ಕೊಳಚೆ ನೀರಿನಲ್ಲಿ ಮೊಸಳೆಯ ಇರುವು ಪತ್ತೆ ಮಾಡಲು ಕಷ್ಟವಾಗುತ್ತಿತ್ತು. ಎಲೆತೋಟದ ಬಳಿ ಅಡಿಕೆ ತೋಟದ ಮಧ್ಯೆಯೇ ಕೊಳಚೆ ನೀರು ಹಾದುಹೋಗುತ್ತಿದ್ದು ಅಕ್ಕಪಕ್ಕ ಪೊದೆಗಳು ಬೆಳದು ನಿಂತಿದ್ದರಿಂದ ಕಾರ್ಯಾಚರಣೆ ಸವಾಲಿನ ಕೆಲಸವಾಗಿತ್ತು. ಈ ಕಾರಣದಿಂದ ಜೆಸಿಬಿ ಬಳಸಿ ಕಾರ್ಯಾಚರಣೆ ಆರಂಭಿಸಲಾಗಿತ್ತೆನ್ನಲಾಗಿದೆ.

ಇದೀಗ ಸೆರೆಯಾಗಿರುವ  ಮೊಸಳೆ ಎಂಟೂವರೆ ಅಡಿಗಳಷ್ಟು ಉದ್ದವಿದೆ. ಮೃಗಾಲಯದಲ್ಲಿ ಇದರ ವಯಸ್ಸು, ಗಾತ್ರ, ತೂಕ ಇತ್ಯಾದಿ ವಿವರಗಳನ್ನು ದಾಖಲಿಸಿದ ಬಳಿಕ ಬಿನಿ ಹಿನ್ನೀರಿಗೆ ಬಿಡಲು ಅರಣ್ಯ ಇಲಾಖೆ  ನಿರ್ಧರಿಸಿದೆ.

Similar News