ಕೋಲಾರ | ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲ: ಸಂತ್ರಸ್ತೆ ಕುಟುಂಬದ ಆರೋಪ

Update: 2022-11-17 17:10 GMT

ಕೋಲಾರ: ''ಮಹಿಳೆಯೊಬ್ಬರಿಗೆ ಏಳು ಲಕ್ಷ ವಂಚಿಸಿ ಅತ್ಯಾಚಾರ ಎಸಗಿರುವ ಪ್ರಕರಣವೊಂದರಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ವಜಾಗೊಂಡಿದ್ದು,  ಆದಾಗ್ಯೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ''ಎಂದು ಸಂತ್ರಸ್ತ ಕುಟುಂಬಸ್ಥರು ಆರೋಪಿಸಿದ್ದಾರೆ. 

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಮಂಚಕಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಾದ ರಾಜಣ್ಣ ಎಂಬುವ ವ್ಯಕ್ತಿ  ತಾಲೂಕಿನ ಸೀತನಾಯಕನಹಳ್ಳಿ ಗ್ರಾಮದ ಮಹಿಳೆ ಒಬ್ಬರಿಗೆ ಸುಮಾರು ಏಳು ಲಕ್ಷಕ್ಕೂ ಹೆಚ್ಚು ಹಣ ವಂಚಿಸಿ,  ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 29ರಂದು ಐಪಿಸಿ ಕಲಂ 323,376,420,450, 506ಗಳ ಅಡಿಯಲ್ಲಿ  ಕ್ರೈಂ ಸಂಖ್ಯೆ 0483/2022 ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಹಿನ್ನೆಲೆ ಶಿಕ್ಷಕ ರಾಜಣ್ಣ ಆರೋಗ್ಯ ಸರಿಯಿಲ್ಲ ಎಂದು ಶಾಲೆಗೆ ರಜೆ ಹಾಕಿ, ಕೋಲಾರದ ಮೊದಲನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಆದರೆ ಮಾನ್ಯ ನ್ಯಾಯಾಲಯವು ಸದರಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. 

ಇಷ್ಟಾದರೂ ಮಾಲೂರು ಪೊಲೀಸರು ಆರೋಪಿಯನ್ನು ಬಂಧಿಸದೇ ಇರುವ ಕಾರಣ ಆರೋಪಿಯಾದ ಶಿಕ್ಷಕ ರಾಜಣ್ಣ ರಾಜಾರೋಷವಾಗಿ ಓಡಾಡಿಕೊಂಡು ಇದ್ದು ಸಂತ್ರಸ್ತೆಗೆ ಹಾಗೂ ಕುಟುಂಬದ ಸದಸ್ಯರಿಗೆ ಮಾನಸಿಕ ದೈರ್ಯ ಕುಸಿಯುವಂತಾಗಿದೆ ಎಂದು ಪತ್ರಿಕಾ ಪ್ರಕಟನೆ ನೀಡಿರುವ ಸಂತ್ರಸ್ತೆ ಮಂಜುಳ ಹಾಗೂ ಆಕೆಯ ಸಹೋದರ ವಿ. ದೀಪಕ್  ಆತಂಕ ವ್ಯಕ್ತಪಡಿಸಿದ್ದಾರೆ. 

''ಮತ್ತೊಂದು ಕಡೆ ಈ ಪ್ರಕರಣದ ಕುರಿತು ಎಫ್ಐಆರ್ ಆಗಿರುವುದು ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಗಮನಕ್ಕೆ ಬಂದಿದ್ದರೂ ಸಹ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೇ ಇರುವುದು ಅಚ್ಚರಿಯ ಸಂಗತಿ ಆಗಿರುತ್ತದೆ. ಜವಾಬ್ದಾರಿ ಸ್ಥಾನದಲ್ಲಿ ಇರುವ ಅಧಿಕಾರಿಗಳ ಈ ರೀತಿಯ ವರ್ತನೆಗಳು ದೌರ್ಜನ್ಯಕ್ಕೆ ಒಳಗಾಗುವ ಸಂತ್ರಸ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸವಾಗುತ್ತಿದೆ'' ಎಂದು ಆರೋಪಿಸಿದ್ದಾರೆ. 

ಆದ್ದರಿಂದ  ಪ್ರಕರಣದ ಆರೋಪಿ ವಿರುದ್ಧ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಸೂಕ್ತ ಕಾನೂನು ಕ್ರಮ  ಕೈಗೊಳ್ಳಬೇಕೆಂದು ಸಂತ್ರಸ್ತೆ ಮಂಜುಳ ಹಾಗೂ ಆಕೆಯ ಸಹೋದರ ವಿ. ದೀಪಕ್ ಆಗ್ರಹಿಸಿದ್ದಾರೆ.

Similar News