PSI ನೇಮಕಾತಿ ಹಗರಣ: ಆರೋಪಿಗಳಿಬ್ಬರಿಗೆ ಕೋರ್ಟ್‍ನಿಂದ ಜಾಮೀನು

Update: 2022-11-18 13:01 GMT

ಬೆಂಗಳೂರು, ನ. 18: ಪಿಎಸ್ಸೈ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಸಂಬಂಧ ಪ್ರಕರಣದ ಮೊದಲ ಆರೋಪಿಗೆ ಹಾಗೂ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದ ಅಭ್ಯರ್ಥಿಗೆ ಬೆಂಗಳೂರಿನ ವಿಶೇಷ ಕೋರ್ಟ್, ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಪಿಎಸ್ಸೈ ಹಗರಣದ ಆರೋಪಿ ಜಾಗೃತ್ ಹಾಗೂ ಮಹಿಳಾ ಕೋಟಾದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದ ರಚನಾಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ವಕೀಲ ಶ್ಯಾಮ್‍ಸುಂದರ್ ಅವರು ವಾದ ಮಂಡಿಸಿದ್ದರು.

545 ಪಿಎಸ್ಸೈ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 17ನೆ ಆರೋಪಿ ರಚನಾಳನ್ನು ಸಿಐಡಿ ವಿಶೇಷ ತನಿಖಾ ತಂಡ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಶಕ್ಕೆ ಪಡೆದಿತ್ತು. ಸಿಐಡಿ ತನಿಖೆಯಲ್ಲಿ ರಚನಾ 30ಲಕ್ಷ ನೀಡಿದ್ದಾರೆಂಬ ಮಾಹಿತಿ ಬಹಿರಂಗವಾಗಿತ್ತು. ಈ ಸಂಬಂಧ 22 ಅಭ್ಯರ್ಥಿಗಳ ವಿರುದ್ಧ ಸಿಐಡಿ ಡಿವೈಎಸ್‍ಪಿ ನರಸಿಂಹಮೂರ್ತಿ ಅವರು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. 

ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಎಸ್.ಜಾಗೃತ್‍ನನ್ನು ಸಿಐಡಿ ಡಿವೈಎಸ್‍ಪಿ ಬಿ.ಕೆ.ಶೇಖರ್ ತಂಡ ಚನ್ನಪಟ್ಟಣದಲ್ಲಿ ಬಂಧಿಸಿತ್ತು. ಎಸ್. ಜಾಗೃತ್ ಪಿಎಸ್ಸೈ ಪರೀಕ್ಷೆಯಲ್ಲಿ 4ನೆ ರ್ಯಾಂಕ್ ಪಡೆದಿದ್ದ. ಎಸ್.ಜಾಗೃತ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಎಫ್‍ಐಆರ್ ಹಾಕಿರುವುದನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ ನಾಲ್ವರು ಅಭ್ಯರ್ಥಿಗಳಲ್ಲಿ ಈ ಜಾಗೃತನೂ ಒಬ್ಬನಾಗಿದ್ದ. ಪಿಎಸ್ಸೈ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿ ಆಯ್ಕೆ ಪ್ರಕ್ರಿಯೆ ನಡೆಸಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. 

Similar News