ಬಾಬಾ ಬುಡಾನ್‍ ಸ್ವಾಮಿ ದರ್ಗಾಕ್ಕೆ 8 ಸದಸ್ಯರ ವ್ಯವಸ್ಥಾಪನಾ ಸಮಿತಿ ರಚನೆ ಮಾಡಿ‌ ರಾಜ್ಯ ಸರ್ಕಾರ ಆದೇಶ

Update: 2022-11-18 14:44 GMT

ಬೆಂಗಳೂರು, ನ.18: ರಾಜ್ಯ ಸರಕಾರವು ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠ ಗ್ರಾಮದ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡಾನ್‍ಸ್ವಾಮಿ ದರ್ಗಾ/ಪೀಠ ಸಂಯುಕ್ತ ಅಧಿಸೂಚಿತ ಸಂಸ್ಥೆಗೆ ಎಂಟು ಸದಸ್ಯರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.

ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆ 2011ರ ಸೆಕ್ಷನ್ 25ರ ಅನ್ವಯ ಹಾಗೂ ಹೈಕೋರ್ಟ್‍ನಲ್ಲಿ ದಾಖಲಾಗಿರುವ ರಿಟ್ ಅಪೀಲು ಸಂಖ್ಯೆ 1110/2022 ರಲ್ಲಿನ ಅಂತಿಮ ಆದೇಶಕ್ಕೆ ಒಳಪಟ್ಟು ಈ ಆದೇಶ ಹೊರಡಿಸಿದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಈ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ದಾಸರಿ ಆದೇಶದಲ್ಲಿ ತಿಳಿಸಿದ್ದಾರೆ.

ಸಮಿತಿ ಸದಸ್ಯರ ವಿವರ : ಚಿಕ್ಕಮಗಳೂರು ತಾಲೂಕಿನ ಸತೀಶ್ ಕೆ., ಲೀಲಾ, ಶೀಲಾ, ಸುಮಂತ್ ಎನ್.ಎಸ್., ಕೆ.ಎಸ್.ಗುರುವೇಶ್, ಬಿ.ಎಚ್.ಹೇಮಂತ್‍ಕುಮಾರ್, ಎಸ್.ಎಂ.ಬಾಷಾ ಹಾಗೂ ಸಿ.ಎನ್.ಚೇತನ್ ಎಂಬವರನ್ನು ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

ಷರತ್ತುಗಳು: ಯಾವುದೆ ರಾಜಕೀಯ ಪಕ್ಷದ ಪದಾಧಿಕಾರಿಯಾಗಿರುವುದು ಕಂಡು ಬಂದಲ್ಲಿ ಅಂತಹವರ ಸದಸ್ಯತ್ವವು ಸಹಜವಾಗಿಯೆ ರದ್ದಾಗುವುದು, ಈ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯನ್ನು ವ್ಯವಸ್ಥಾಪನಾ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯೆಂದು ನೇಮಿಸಲಾಗಿದೆ. ಈ ಸದಸ್ಯರು ಪ್ರಥಮ ಸಭೆಯಲ್ಲಿ ತಮ್ಮಲ್ಲಿ ಒಬ್ಬರನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Similar News