ಪುನರ್ ವಿಚಾರಣೆಯಲ್ಲಿ ಸುಪ್ರಿಂಗೆ ತನ್ನ ತಪ್ಪಿನ ಅರಿವಾಗಲಿ: ನ್ಯಾ. ನಾಗಮೋಹನ್ ದಾಸ್

ಮೇಲ್ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ

Update: 2022-11-19 16:34 GMT

ಬೆಂಗಳೂರು, ನ.19: ‘ಮೇಲ್ವರ್ಗಗಳಿಗೆ ನೀಡಿರುವ ಶೇ.10ರಷ್ಟು ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಸಮರ್ಥನೆ ಮಾಡಿಕೊಂಡಿದ್ದು, ಕೆಲವರು ಸುಪ್ರೀಂನ ಈ ತೀರ್ಪನ್ನು ಪುನರ್ ಪರಿಶೀಲನೆಯನ್ನು ಮಾಡುವಂತೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಾರೆ. ಸುಪ್ರೀಂ ಕೋರ್ಟ್ ಈಗಾಲಾದರೂ ತನ್ನ ತಪ್ಪನ್ನು ಅರಿತುಕೊಳ್ಳಬೇಕು’ ಎಂದು ಹೈಕೋರ್ಟ್‍ನ ನಿವೃತ್ತ ನ್ಯಾ.ನಾಗಮೋಹನ್ ದಾಸ್ ತಿಳಿಸಿದ್ದಾರೆ.

ಶನಿವಾರ ‘ಜನ ಮಾಧ್ಯಮವು’ ಆಯೋಜಿಸಿದ್ದ ‘ಸಾಮಾನ್ಯ ವರ್ಗದ ಶೇ.10ರಷ್ಟು ಮೀಸಲಾತಿ’ ಕುರಿತು ಆನ್‍ಲೈನ್ ಉಪನ್ಯಾಸದಲ್ಲಿ ಮಾತನಾಡಿದ ಅವರು, ಸಂವಿಧಾನಕ್ಕೆ 103ನೆ ತಿದ್ದುಪಡಿ ಮಾಡುವ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹೆಸರಿನಲ್ಲಿ ಮೇಲ್ವರ್ಗಗಳಿಗೆ ಮೀಸಲಾತಿಯನ್ನು ನೀಡಲಾಗಿದೆ. ಇದನ್ನು ಸಂಸತ್ತಿನಲ್ಲಿ ಡಿಎಂಕೆ ಪಕ್ಷ ಹೊರತುಪಡಿಸಿ ಬೇರೆ ಯಾವುದೇ ಪಕ್ಷಗಳು ವಿರೋಧವನ್ನು ವ್ಯಕ್ತಪಡಿಸಿಲ್ಲ. ಈಗ ಮೀಸಲಾತಿಯನ್ನು ಸುಪ್ರಿಂ ಕೋರ್ಟ್ ಸಮರ್ಥನೆ ಮಾಡಿಕೊಂಡಿರುವುದು ದುರಾದೃಷ್ಟ ಎಂದರು.

ಸುಪ್ರೀಂ ಕೋರ್ಟ್‍ನ ತೀರ್ಪನ್ನು ನಾವೆಲ್ಲಾರೂ ಗೌರವಿಸಬೇಕು. ಮೇಲ್ವರ್ಗಗಳಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪಿಗೆ ದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ತೀರ್ಪಿನಿಂದ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಹಾಗಾಗಿ ಸಂವಿಧಾನದ ಹಕ್ಕಿನಡಿ ಅದನ್ನು ವಿಮರ್ಶಿಸಬೇಕು ಎಂದು ಸಲಹೆ ನೀಡಿದರು. 

ಮೇಲ್ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಎಷ್ಟು ಸಮುದಾಯಗಳಿಗೆ, ಎಷ್ಟು ಜನರು ಇದ್ದಾರೆ ಎನ್ನುವ ದತ್ತಾಂಶವೇ ಇಲ್ಲ. ಆದರೂ ತಿದ್ದುಪಡಿ ತಂದು ಮೀಸಲಾತಿ ನೀಡಿದ್ದಾರೆ. ಶಿಕ್ಷಣ ಮತ್ತು ಉದ್ಯೋಗವು ಶೇ.98ರಷ್ಟು ಭಾಗದ ಖಾಸಗಿ ಕ್ಷೇತ್ರದಲ್ಲಿದೆ. ಇಲ್ಲಿ ಯಾವುದೇ ರೀತಿಯ ಮೀಸಲಾತಿಯು ಅನ್ವಯವಾಗುವುದಿಲ್ಲ. ಉಳಿದ ಶೇ.2ರಷ್ಟು ಸರಕಾರಿ ಕ್ಷೇತ್ರದಲ್ಲಿ ಮಾತ್ರ ಮೀಸಲಾತಿ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು. 

ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿಯನ್ನು ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿದ್ದು, ಇಲ್ಲಿಯೂ ಮೀಸಲಾತಿ ಅನ್ವಯಿಸುವುದಿಲ್ಲ. ಹಾಗಾಗಿ ಮೀಸಲಾತಿಯೊಂದೆ ಪರಿಹಾರವಲ್ಲ. ದೇಶದಲ್ಲಿರುವ ಬಡತನವನ್ನು ಮೀಸಲಾತಿಯಿಂದ ಇಳಿಸಿಲ್ಲ, ಬದಲಾಗಿ ಆರ್ಥಿಕ ಯೋಜನೆಗಳ ಜಾರಿಯಿಂದ ಇಳಿಸಿದ್ದಾರೆ. ಹಾಗಾಗಿ ಯೋಜನೆಗಳನ್ನು ಅನುಷ್ಟಾನ ಮಾಡಬೇಕು ಎಂದರು. 

Similar News