ಬಿಲ್ಲವ, ಈಡಿಗರ ಬೇಡಿಕೆ ಈಡೇರಿಸುವಲ್ಲಿ ಸರಕಾರ ವಿಫಲ: ಡಾ.ಪ್ರಣವಾನಂದ ಶ್ರೀ

ಜ.6ರಿಂದ ಮಂಗಳೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ

Update: 2022-11-19 18:24 GMT

ಶಿವಮೊಗ್ಗ: ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ವತಿಯಿಂದ ಬಿಲ್ಲವ ಈಡಿಗ ನಾಮಧಾರಿ ಸೇರಿದಂತೆ ಸಮಾಜದ ಬೇಡಿಕೆಗಾಗಿ ಮಂಗಳೂರಿನಿಂದ ಬೆಂಗಳೂರಿನವರೆಗೆ ಐತಿಹಾಸಿಕ ಪಾದಯಾತ್ರೆಯನ್ನು ಜ.6ರಂದು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯ ಸರಕಾರ ಬಿಲ್ಲವ ಈಡಿಗರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ.ಈಡಿಗರ ಮತ ಪಡೆದುಕೊಂಡು ಅಧಿಕಾರ ಸಿಕ್ಕ ಮೇಲೆ ಕಡೆಗಣಿಸುವ ಕೆಲಸ ಮಾಡಿದೆ.ಹಾಗಾಗಿ ನಮ್ಮ ಸಮುದಾಯದ ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಮಂಗಳೂರಿನಿಂದ ಬೆಂಗಳೂರಿನವರೆಗೆ ಸುಮಾರು 658 ಕಿ.ಮೀ.ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಾಡಿ 500 ಕೋಟಿ ರೂ.ಗಳನ್ನು ಮೀಸಲಿಡಬೇಕು. ರಾಜ್ಯಾದ್ಯಂತ ಕುಲಕಸುಬು ಶೇಂದಿ ಇಳಿಸಿ ಮಾರಾಟ ಮಾಡುವುದಕ್ಕೆ  ಅನುಮತಿ ನೀಡಬೇಕು. ಈಡಿಗ ಸಮುದಾಯದ ನೇತೃತ್ವದಲ್ಲಿ ನಡೆಯುವ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಮೇಲೆ ಸರಕಾರದ ದೌರ್ಜನ್ಯ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಈಡಿಗರು, ಬಿಲ್ಲವರು ಹೆಚ್ಚಾಗಿರುವ ಮಂಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಸ್ಥಾಪನೆ ಮಾಡಬೇಕು. 2ಎ ವರ್ಗದಲ್ಲಿರುವ ಈಡಿಗ,ಬಿಲ್ಲವ ಸಮಾಜಕ್ಕೆ ಅನ್ಯಾಯವಾಗದಂತೆ ಮೀಸಲಾತಿ ಹೆಚ್ಚಳ ಮಾಡಬೇಕು.12ನೇ ಶತಮಾನದ ಅನುಭವ ಮಂಟಪದಲ್ಲಿ ಈಡಿಗ ಸಮುದಾಯದ ಶರಣರಾಗಿದ್ದ ಶ್ರೀ ಶರಣ ಧುರಣ ಮಾರಯ್ಯನ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಎಲ್ಲ ವಿವಿಗಳಲ್ಲಿ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು.ಸರಕಾರಿ ಗೋಮಾಳ, ಹುಲ್ಲುಗಾವಲು ಜಮೀನಿನಲ್ಲಿ ಸರಕಾರಿ ವೆಚ್ಚದಲ್ಲಿ ಈಚಲು ಮರ,ತೆಂಗಿನ ಮರ,ತಾಳೆ ಮರಗಳನ್ನು ನೆಡಬೇಕು. ಶೇಂದಿ ಇಳಿಸುವವರಿಗೆ ಶೇ.ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು ಹಾಗೂ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಘೋಷಿಸಬೇಕೆಂದು ಆಗ್ರಹಿಸಿ ಐತಿಹಾಸಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಮುದಾಯದ ಎಲ್ಲರೂ ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಭಾಗಹಿಸಿ ಅನ್ಯಾಯದ ವಿರುದ್ದ ಧ್ವನಿ ಎತ್ತುವಂತೆ ಸ್ವಾಮೀಜಿ ಮನವಿ ಮಾಡಿದರು.

Similar News