ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಅನುಮತಿ ನೀಡಿದ್ದೇ ಅಂದಿನ ಕಾಂಗ್ರೆಸ್ ಸರಕಾರ

ಆದೇಶ ಪ್ರತಿಯೊಂದಿಗೆ ಸಚಿವ ಡಾ.ಕೆ.ಸುಧಾಕರ್ ಟ್ವೀಟ್

Update: 2022-11-20 05:46 GMT

ಬೆಂಗಳೂರು: ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ 2017ರಲ್ಲಿ ಅಂದಿನ ಕಾಂಗ್ರೆಸ್ ಸರಕಾರವೇ ಅನುಮತಿ ನೀಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಆದೇಶ ಪ್ರತಿಯೊಂದಿಗೆ ಟ್ವೀಟ್ ಮಾಡಿರುವ ಅವರು, ಒಂದು ಸಂಸ್ಥೆಯ ಮೇಲೆ ಈಗ ಇಲ್ಲಸಲ್ಲದ ಆರೋಪ ಮಾಡಿ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿರುವುದು ’ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಸವರಿದಂತಾಗಿದೆ ಎಂದಉ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ರಚನಾತ್ಮಕ ಹೋರಾಟ ಮಾಡಲು ಯಾವುದೇ ವಿಷಯಗಳಲ್ಲಿದೆ ಹತಾಶಗೊಂಡಿರುವ ಕಾಂಗ್ರೆಸ್ ನಾಯಕರು ದಿನಕ್ಕೊಂದು ಕಟ್ಟುಕಥೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದು, ಬಿಜೆಪಿ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಮಸಿ ಬಳಿಯುವ ಭರಾಟೆಯಲ್ಲಿ ತಮಗೆ ತಾವೇ ಮಸಿ ಬಳಿದುಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ದಿಟ್ಟ ನಾಯಕತ್ವ, ಅಭಿವೃದ್ಧಿ, ಸುಶಾಸನ, ಭ್ರಷ್ಟಾಚಾರ-ಮುಕ್ತ ಆಡಳಿತ ನೀಡುವ ಮೂಲಕ ದೇಶಾದ್ಯಂತ ಜನಮನ್ನಣೆ ಪಡೆಯುತ್ತಿರುವ ನಮ್ಮ ಪಕ್ಷಕ್ಕೆ ಚುನಾವಣೆ ಗೆಲ್ಲಲು ಯಾವುದೇ ವಾಮ ಮಾರ್ಗದ ಅವಶ್ಯಕತೆಯೂ ಇಲ್ಲ ಅದರ ಬಗ್ಗೆ ನಂಬಿಕೆಯೂ ಇಲ್ಲ ಎಂದು ಅವರು ತಿಳಿಸಿದ್ದಾರೆ.

'ಕುಣಿಯಲಾರದವನಿಗೆ ನೆಲ ಡೊಂಕು' ಎಂಬಂತೆ ಜನರ ವಿಶ್ವಾಸ ಕಳೆದುಕೊಂಡು ಹತಾಶಗೊಂಡಿರುವ ಕಾಂಗ್ರೆಸ್ ಪಕ್ಷ ಮತಯಂತ್ರಗಳ ಮೇಲೆ ಸಂಶಯ ಮೂಡಿಸುವುದು, ಚುನಾವಣಾ ಆಯೋಗದ ಬಗ್ಗೆ ಅಪಸ್ವರ ಎತ್ತುವುದು ಹೀಗೆ ಒಂದಲ್ಲಾ ಒಂದು ಕ್ಯಾತೆ ತೆಗೆಯುತ್ತಲೆ ಬಂದಿದ್ದು ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಆರೋಪ ಈ ಸುಳ್ಳುಗಳ ಸರಮಾಲೆಗೆ ಹೊಸ ಸೇರ್ಪಡೆಯಷ್ಟೆ ಎಂದು ಅವರು ತಿಳಿಸಿದ್ದಾರೆ.

Similar News