ಅಜ್ಜಂಪುರ ಠಾಣಾಧಿಕಾರಿ ಲಿಂಗರಾಜು‌ ಸಹಿತ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ ದಾಖಲು

ಚಿನ್ನದ ವ್ಯಾಪಾರಿಯನ್ನು ಬೆದರಿಸಿ ೫ ಲಕ್ಷ ರೂ. ದರೋಡೆ: ಆರೋಪ

Update: 2022-11-20 13:57 GMT

ಚಿಕ್ಕಮಗಳೂರು: ಚಿನ್ನದ ವ್ಯಾಪಾರಿಯನ್ನು ಬೆದರಿಸಿ ೫ ಲಕ್ಷ ರೂ. ದರೋಡೆ ಮಾಡಿದ್ದಾರೆಂದು ವರ್ತಕ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣಾಧಿಕಾರಿ ಲಿಂಗರಾಜು‌ ಸೇರಿದಂತೆ ನಾಲ್ವರು ಪೊಲೀಸರ ವಿರುದ್ಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಆರೋಪಿಗಳು ನಾಪತ್ತೆಯಾಗಿದ್ದಾರೆ.

ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ‌ ಆರೋಪಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ದಾವಣಗೆರೆ ಮೂಲದ  ಚಿನ್ನದ ವ್ಯಾಪಾರಿ ಭಗವಾನ್ ಎಂಬವರನ್ನು ಬೆದರಿಸಿ‌ ೫ ಲಕ್ಷ ರೂ. ಕಸಿದುಕೊಂಡಿದ್ದಾರೆಂದು‌ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಈ ದೂರು ದಾಖಲಾಗಿದ್ದು, ಪ್ರಕರಣದಲ್ಲಿ  ಅಜ್ಜಂಪುರ ಠಾಣಾಧಿಕಾರಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ಠಾಣಾಧಿಕಾರಿ ಲಿಂಗರಾಜು ಮುಖ್ಯ ಆರೋಪಿಯಾಗಿದ್ದಾರೆ. ಸಖರಾಯಪಟ್ಟಣ ಠಾಣೆಯ  ಧನಪಾಲ ನಾಯಕ್, ಕುದುರೆಮುಖದ ಓಂಕಾರ ಮೂರ್ತಿ, ಲಿಂಗದಹಳ್ಳಿಯ ಶರತ್ ರಾಜ್ ಉಳಿದ ಆರೋಪಿಗಳು ಎಂದು ತಿಳಿದುಬಂದಿದೆ.

ದಾವಣಗೆರೆಯ ಚಿನ್ನದ ವರ್ತಕ ಭಗವಾನ್ ರವರ ಪುತ್ರ ರೋಹಿತ್ ಸುಮಾರು 2 ಕೆಜಿ ಚಿನ್ನದ ಆಭರಣಗಳನ್ನು ಬೇಲೂರಿನ  ವರ್ತಕ ಒಬ್ಬರಿಗೆ ನೀಡಲು ಕಾರಿನಲ್ಲಿ ಬರುತ್ತಿದ್ದಾಗ‌ ಕಾರನ್ನು ಅಡ್ಡಹಾಕಿ ಹಣ ವಸೂಲಿ ಮಾಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.

ರೋಹಿತ್ ಆಭರಣಗಳೊಂದಿಗೆ ಬರುತ್ತಿದ್ದ ಸಂದರ್ಭದಲ್ಲಿ ತರೀಕೆರೆ ತಾಲೂಕಿನ ಬುಕ್ಕಾಂಬುದಿ ಗೇಟಿನ ಬಳಿ ಇಬ್ಬರು ಪೊಲೀಸರು ಕಾರನ್ನು ತಡೆದು ನಿಲ್ಲಿಸಿದ್ದಾರೆ. ನೆರವಾಗಿ ಕಾರಿನ ಒಳಗೆ ಬಂದು ಕುಳಿತ ಪೊಲೀಸ್ ಸಿಬ್ಬಂದಿ, ಸ್ವಲ್ಪ ದೂರದಲ್ಲಿದ್ದ ಠಾಣಾಧಿಕಾರಿ ಲಿಂಗರಾಜು ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ರೋಹಿತ್ ಅನ್ನು ಬಲವಂತವಾಗಿ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ೫ ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟು,‌ ತಪ್ಪಿದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುವ ಆರೋಪದ ಮೇಲೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ. ತಾನು ಕಾನೂನು ಬದ್ಧವಾಗಿ ವ್ಯಾಪಾರ ಮಾಡುತ್ತಿದ್ದು, ಆಭರಣಗಳಿಗೆ  ಸಂಬಂಧಿಸಿದ ದಾಖಲೆಗಳನ್ನು ತೋರಿಸಿದರೂ ಬಿಡದೆ ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಂತಿಮವಾಗಿ 5 ಲಕ್ಷ ರೂ.ಗಳಿಗೆ ವ್ಯವಹಾರ ಕುದುರಿದ್ದು ರೋಹಿತ್ ಅಜ್ಜಂಪುರದಲ್ಲಿರುವ ವರ್ತಕರೊಬ್ಬರಿಂದ ಹಣವನ್ನು ಪಡೆದು ಇವರಿಗೆ ಸಂದಾಯ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು,  ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಪ್ರಕರಣದಿಂದಾಗಿ ಜಿಲ್ಲೆಯ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಆಗಿದೆ.

Similar News