ಕೊನೆಯ ಕ್ಷಣದಲ್ಲಿ ‘ಕೈ’ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ

Update: 2022-11-21 15:31 GMT

ಬೆಂಗಳೂರು, ನ. 21: ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲದ ಬೆನ್ನಲ್ಲೇ, ಅವರು ಪಕ್ಷದ ಟಿಕೆಟ್‍ಗಾಗಿ ಅಂತಿಮ ದಿನವೇ(ನ.21) ಅರ್ಜಿ ಸಲ್ಲಿಸಿದ್ದಾರೆ.

ತಮ್ಮ ಆಪ್ತ ಸಹಾಯಕರಾದ ಪ್ರಭಾಕರ್ ಮತ್ತು ವೆಂಕಟೇಶ್ ಅವರ ಮೂಲಕ ಟಿಕೆಟ್‍ಗೆ ಅರ್ಜಿ ಹಾಕಿಸಿದ್ದಾರೆ. ಆದರೆ, ಯಾವ ಕ್ಷೇತ್ರದಿಂದ ಟಿಕೆಟ್ ಬೇಕು ಎನ್ನುವುದನ್ನು ಮಾತ್ರ ಹೇಳಿಲ್ಲ. ಕ್ಷೇತ್ರದ ಹೆಸರು ಬರೆಯದೆ ಅರ್ಜಿ ಸಲ್ಲಿಸಿರುವ ಸಿದ್ದರಾಮಯ್ಯ, ಹೈಕಮಾಂಡ್ ಸೂಚನೆ ಮೇರೆಗೆ ಕ್ಷೇತ್ರದ ಆಯ್ಕೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಹೀಗಾಗಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆಂಬುದು ಅವರ ವಿರೋಧಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ. ಆದರೆ, ಸಿದ್ದರಾಮಯ್ಯ ಅವರು ಕೊನೆಯ ಕ್ಷಣದಲ್ಲಿ ಟಿಕೆಟ್‍ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದು ರಾಜಕೀಯ ಕುತೂಹಲ ಸೃಷ್ಟಿಸಿದ್ದಾರೆ.

ನ.25ಕ್ಕೆ ಆಕಾಂಕ್ಷಿಗಳ ಸಭೆ: ‘2023ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಸಭೆಯನ್ನು ನ.25ರಂದು ಬೆಂಗಳೂರಿನ ವರ್ತೂರು ಸಮೀಪದ ಪ್ರಷ್ಟಿ ವಿಲೇಜ್‍ನಲ್ಲಿ ಕರೆಯಲಾಗಿದೆ. ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು, ಉಸ್ತುವಾರಿ ಕಾರ್ಯದರ್ಶಿಗಳು, ಸಂಸದರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ. ಪಾಲ್ಗೊಳ್ಳಲಿರುವ ಆಕಾಂಕ್ಷಿಗಳು ತಮ್ಮ ಕ್ಷೇತ್ರದ ಪ್ರತಿಯೊಂದು ಬೂತ್‍ನ ಸಂಪೂರ್ಣ ವಿವರಗಳೊಂದಿಗೆ ಹಾಜರಾಗಬೇಕು’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಇದನ್ನೂ ಓದಿ: BJP ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬಿಎಸ್ ವೈ ಆಪ್ತ, ಮಾಜಿ ಶಾಸಕ ಯು.ಬಿ.ಬಣಕಾರ್

Similar News