×
Ad

ಸಚಿವಾಲಯದ ಕಾರು ಬಳಸಿ 1ಕೋಟಿ ರೂ. ವಂಚನೆ: ಆರೋಪ ಮುಕ್ತಗೊಳಿಸಲು ಹೈಕೋರ್ಟ್ ನಿರಾಕರಣೆ

Update: 2022-11-21 19:49 IST

ಬೆಂಗಳೂರು, ನ. 21: ಸಚಿವಾಲಯದ ಕಾರು ಬಳಕೆ ಮಾಡಿಕೊಂಡು 100 ಕೋಟಿ ರೂ. ಸಾಲ ಕೊಡಿಸುವುದಾಗಿ ನಂಬಿಸಿ 1 ಕೋಟಿ ರೂ.ವಂಚಿಸಿದ್ದ ಕೇಸ್‍ನಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ದೋಷಮುಕ್ತಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. 

ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ 13ನೆ ಆರೋಪಿಯಾಗಿರುವ, ಗುಟ್ಟಹಳ್ಳಿಯ ನಿವಾಸಿ ಬಿ.ಎಂ.ಸತೀಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಪ್ರಕರಣ ರದ್ದುಪಡಿಸುವುದಕ್ಕೆ ನಿರಾಕರಿಸಿದೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಪೊಲೀಸರು, ಅರ್ಜಿದಾರರ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಅಲ್ಲದೆ, ಆರೋಪಿಯೇ ದೂರುದಾರರನ್ನು ಸಾಲ ಪಡೆಯಲು ಕರೆದುಕೊಂಡು ಹೋಗಿದ್ದಾರೆ. ಈ ಆರೋಪಿಯು ಶಾಸಕರ ಭವನದ ಕಾರು ಚಾಲಕನಾಗಿದ್ದು, ಸಚಿವಾಲಯಕ್ಕೆ ಸೇರಿದ ಕಾರನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತಂತೆ ಆರೋಪ ಪುಷ್ಟಿಕರಿಸಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. 

ಅರ್ಜಿದಾರರ ಪರ ವಾದಿಸಿದ ವಕೀಲರು, ಪ್ರಕರಣದ ಮತ್ತೊಬ್ಬರ ಸೂಚನೆ ಮೇರೆಗೆ ದೂರುದಾರರನ್ನು ನಗರದ ಒಬೆರಾಯ್ ಹೊಟೇಲ್‍ನಿಂದ ವಿಧಾನಸೌಧದವರೆಗೂ ಅರ್ಜಿದಾರರು ಕರೆ ತಂದಿದ್ದರು. ತನಿಖಾಧಿಕಾರಿಗಳು ದುರುದ್ದೇಶಪೂರ್ವಕವಾಗಿ ಕೇಸ್‍ನಲ್ಲಿ ಸಿಲುಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಕೇಸ್‍ನಿಂದ ತಮ್ಮ ಕಕ್ಷಿದಾರರನ್ನು ಮುಕ್ತಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. 

ಪ್ರಕರಣವೇನು?: ಗೋಡಂಬಿ ಮಾರಾಟದ ವ್ಯವಹಾರಕ್ಕಾಗಿ 100 ಕೋಟಿ ರೂ.ಸಾಲ ಕೊಡಿಸುವುದಾಗಿ ಆರೋಪಿ ಬಿ.ಎಂ.ಸತೀಶ್ ಸೇರಿ ಹಲವರು ದೂರುದಾರರಿಗೆ ತಿಳಿಸಿದ್ದರು. ಇದಕ್ಕಾಗಿ ವಿಧಾನಸೌಧದ ಒಂದನೆ ಮಹಡಿಯಲ್ಲಿ ಚರ್ಚೆಯನ್ನು ನಡೆಸಿದ್ದರು.

ಅಲ್ಲದೇ, ಒಟ್ಟು ಸಾಲದ ಮೊತ್ತಕ್ಕೆ ಶೇ. 1.2 ರಷ್ಟು ಸ್ಟ್ಯಾಂಪ್ ಡ್ಯೂಟಿಗಾಗಿ ಮುಂಗಡವಾಗಿ ನೀಡಬೇಕು ಎಂದು ತಿಳಿಸಿ 1 ಕೋಟಿ 12 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದರು. ಬಳಿಕ ಹಣ ಹಿಂದಿರುಗಿಸದೇ ಮೋಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯ ದೊರಕಿಸಿಕೊಡಬೇಕು ಎಂದು ದೂರುದಾರರು ಮನವಿ ಮಾಡಿದ್ದರು.

Similar News