ನ. 22 ರಿಂದ ರಾಜ್ಯದಲ್ಲಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Update: 2022-11-21 14:24 GMT

ಬೆಂಗಳೂರು, ನ.21: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ನ.22ರಿಂದ ರಾಜ್ಯದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಒಂದು ವಾರದಿಂದ ಮಳೆ ಕಡಿಮೆಯಾಗಿ, ವಿಪರೀತ ಚಳಿ ಶುರುವಾಗಿತ್ತು. ಚಳಿಯ ನಡುವೆಯೇ ಬೆಂಗಳೂರಿನಲ್ಲಿ ಮಂಗಳವಾರದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಬೆಂ.ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು , ತುಮಕೂರು, ವಿಜಯಪುರ ಹಾಗೂ ಹಾವೇರಿ ಸೇರಿ ಇತರ ಜಿಲ್ಲೆಗಳಲ್ಲಿ ನ.22ರಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ರಾಜ್ಯದಲ್ಲಿ ಚಳಿಯೂ ಏರಿಕೆಯಾಗಿದ್ದು, ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಜನರ ಮೈ ನಡುಗಿಸುತ್ತಿದೆ. ಸದ್ಯ ಚಳಿ ಜೊತೆಗೆ ಮಳೆಯೂ ಬೀಳುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಚಳಿ ಡಿಸೆಂಬರ್ ಮೂರನೆ ವಾರದ ಬಳಿಕ ಹೆಚ್ಚಾಗುತ್ತಿತ್ತು. ಆದರೆ, ಈ ಬಾರಿ ಚಳಿ ನವೆಂಬರ್‍ ನಲ್ಲೇ ಶುರುವಾಗಿದೆ. ನ.24ರಿಂದ ಚಳಿ ಜನರನ್ನು ಮತ್ತಷ್ಟು ನಡುಗಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  

Similar News