ಮೂಡಿಗೆರೆ ಭಾಗದಲ್ಲಿ ಉಪಟಳ ಮಾಡುತ್ತಿರುವ 3 ಕಾಡಾನೆಗಳ ಸೆರೆಗೆ ಸರಕಾರ ಆದೇಶ

Update: 2022-11-21 15:38 GMT

ಚಿಕ್ಕಮಗಳೂರು, ನ.21: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡು ಭಾಗದಲ್ಲಿ ಸಂಚರಿಸುತ್ತಿರುವ ಮೂರು ನರಹಂತಕ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶಿಸಿದ್ದಾರೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ (Elephant) ಹಾವಳಿ ಹೆಚ್ಚುತ್ತಿದ್ದು, ರವಿವಾರ ಕಡಾನೆ ದಾಳಿಯಿಂದಾಗಿ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದ ಹುಲ್ಲೆಮನೆ ಗ್ರಾಮದಲ್ಲಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, ಈ ಘಟನೆಯಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಸ್ಥಳಕ್ಕೆ ಆಗಮಿಸಿದ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಉದ್ರಿಕ್ತ ಗ್ರಾಮಸ್ಥರು ಹಲ್ಲೆ ಮಾಡಲೂ ಯತ್ನಿಸಿದ್ದರು. ಘಟನೆ ಸಂಬಂಧ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಸರಕಾರ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಜಿಲ್ಲಾದ್ಯಂತ ಆಕ್ರೋಶ ವ್ಯಕ್ತವಾಗಿದ್ದಲ್ಲೇ ಜನರ ಪ್ರಾಣ ತೆಗೆಯುತ್ತಿರುವ ಕಾಡಾನೆಗಳ ಸೆರೆಗೆ ಸರಕಾರ ಕ್ರಮವಹಿಸಬೇಕೆಂಬ ಕೂಗು ಹೆಚ್ಚಿತ್ತು.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸೋಮವಾರ ಅರಣ್ಯ ಇಲಾಖೆ ಮೂಲಕ ಆದೇಶ ಹೊರಡಿಸಿದ್ದು, ಮೂಡಿಗೆರೆ ಭಾಗದಲ್ಲಿ ಸಂಚರಿಸುತ್ತಿರುವ ಮೂರು ನರಹಂತಕ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕೆಂದು ಆದೇಶಿಸಿದ್ದು, ಚಿಕ್ಕಮಗಳೂರು ವೃತ್ತದ ಡಿಎಫ್‍ಒ ಅವರು ಮೂರು ಕಾಡಾನೆಗಳ ಸೆರೆಗೆ ಕ್ರಮವಹಿಸಬೇಕೆಂದು ಸರಕಾರ ಆದೇಶದಲ್ಲಿ ತಿಳಿಸಿದೆ.

Similar News