ಓಲಾ, ಉಬರ್ ಆಟೊ ಸೇವೆ ಕುರಿತಂತೆ ನ.25ರೊಳಗೆ ನಿರ್ಧಾರ: ಹೈಕೋರ್ಟ್ ಗೆ ಸರಕಾರದ ಮಾಹಿತಿ

Update: 2022-11-21 16:47 GMT

ಬೆಂಗಳೂರು, ನ.21: ಓಲಾ, ಉಬರ್ ಹಾಗೂ ರ್ಯಾಪಿಡೋ ಸೇವೆಗಳಲ್ಲಿ ಆಟೊರಿಕ್ಷಾ ಬಳಕೆಗೆ ದರ ನಿಗದಿಗೆ ಕುರಿತಂತೆ ಅಹವಾಲು ಕೇಳಲಾಗಿದೆ ಹಾಗೂ ನ.25ರ ಒಳಗಾಗಿ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಹೈಕೋರ್ಟ್‍ಗೆ ಸರಕಾರ ಮಾಹಿತಿ ನೀಡಿದೆ.

ಆ್ಯಪ್ ಮೂಲಕ ಆಟೊರಿಕ್ಷಾ ಸೇವೆ ನೀಡುವಂತಿಲ್ಲ. ತಕ್ಷಣ ಈ ಸೇವೆ ಸ್ಥಗಿತಗೊಳಿಸಬೇಕೆಂದು ರಾಜ್ಯ ಸರಕಾರ ಇತ್ತೀಚೆಗೆ ನಿರ್ದೇಶಿಸಿರುವ ಆಕ್ಷೇಪಾರ್ಹ ಆದೇಶ ವಜಾ ಮಾಡುವಂತೆ ಕೋರಿ ಆ್ಯಪ್ ಆಧಾರಿತ ರಿಕ್ಷಾ ಸೇವೆ(ಅಗ್ರಿಗೇಟರ್) ಕಂಪೆನಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನ್ಯಾ.ಸಿ.ಎಂ.ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು,  ಆಟೊರಿಕ್ಷಾ ದರ ನಿಗದಿ ಬಗ್ಗೆ ನ.25ರೊಳಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಈ ಹಿನ್ನೆಲೆಯಲ್ಲಿ ಶುಕ್ರವಾರದವರೆಗೂ ಆಟೊರಿಕ್ಷಾ ದರ ಹೆಚ್ಚಳದ ಕುರಿತಂತೆ ಮಧ್ಯಂತರ ಆದೇಶ ನೀಡದಂತೆ ಎಜಿ ಅವರು ಪೀಠಕ್ಕೆ ಮನವಿ ಮಾಡಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠವು ವಿಚಾರಣೆಯನ್ನು ನ.28ಕ್ಕೆ ಮುಂದೂಡಿತು. 

Similar News