ತುಮಕೂರು | ಮತದಾರರ ಪಟ್ಟಿಯಲ್ಲಿ 21 ಸಾವಿರ ಮತದಾರರ ಹೆಸರು ನಾಪತ್ತೆ: ಮಾಜಿ ಶಾಸಕ ರಫೀಕ್ ಅಹ್ಮದ್ ಆರೋಪ

Update: 2022-11-21 17:22 GMT

ತುಮಕೂರು,ನ.21: 'ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 4,500 ಮುಸ್ಲಿಮ್ ಮತದಾರರು ಸೇರಿದಂತೆ ಒಟ್ಟು 21 ಸಾವಿರಕ್ಕೂ ಹೆಚ್ಚು ಮತದಾರರನ್ನು ಕೈಬಿಡಲಾಗಿದೆ, ಆಧಾರ್ ಕಡ್ಡಾಯ ಹೆಸರಿನಲ್ಲಿ 21 ಸಾವಿರ ಮತದಾರರನ್ನು ಕೈಬಿಡಲಾಗುತ್ತಿದೆ' ಎಂದು ಮಾಜಿ ಶಾಸಕ ರಫೀಕ್ ಅಹ್ಮದ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ''2022ರ ಜನವರಿಯಲ್ಲಿ ನೀಡಿದ ಅಂತಿಮ ಮತದಾರರ ಪಟ್ಟಿಗೂ, ಕೆಲ ದಿನಗಳ ಹಿಂದೆ ಪ್ರಕಟಮಾಡಿರುವ 2023ರ ಮತದಾರರ ಕರಡು ಪಟ್ಟಿಯಲ್ಲಿ 9277 ಮತದಾರರನ್ನು ಹೊಸದಾಗಿ ಸೇರಿಸಿ, 6664 ಜನರನ್ನು ಕೈಬಿಡಲಾಗಿದೆ. ಆದರೆ ಒಟ್ಟಾರೆ ಮತಪಟ್ಟಿಯಲ್ಲಿ ಕಳೆದ 10 ತಿಂಗಳಲ್ಲಿ 21ಸಾವಿರ ಮತದಾರರನ್ನು ಕೈಬಿಡಲಾಗಿದೆ, ಅಲ್ಪಸಂಖ್ಯಾತ ಮತ್ತು ದಲಿತ ವರ್ಗದ ಮತಗಳನ್ನೇ ಕೈಬಿಡುವ ಮೂಲಕ ರಾಜಕೀಯ ಮಾಡಲಾಗಿದೆ'' ಎಂದು ದೂರಿದರು.

''2013ರಲ್ಲಿ ಕರಡು ಪಟ್ಟಿಯಲ್ಲಿ ಕೈಬಿಡುವ ಮತದಾರರ ಪಟ್ಟಿ, ಸೇರ್ಪಡೆಗೊಳ್ಳುವ ಮತದಾರರ ಪಟ್ಟಿಯನ್ನು ಮಾಹಿತಿ ಸಮೇತ ನೀಡಲಾಗಿತ್ತು, ಆದರೆ 2022ರ ಮತದಾರರ ಪಟ್ಟಿಯಲ್ಲಿ ಯಾರನ್ನು ಕೈ ಬಿಡಲಾಗುತ್ತಿದೆ ಮತ್ತು ಯಾರನ್ನು ಸೇರಿಸಲಾಗಿದೆ ಎಂಬ ಮಾಹಿತಿಯೇ ಇಲ್ಲ. ಮಾಹಿತಿಯನ್ನು ಮುಚ್ಚಿಟ್ಟು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳನ್ನು ಭೇಟಿಯಾಗಿ ದೂರು ಸಲ್ಲಿಸಲಾಗುವುದು'' ಎಂದು ತಿಳಿಸಿದರು. 

''ಮತದಾರರ ಪಟ್ಟಿಯನ್ನು ಆಧಾರ್ ಗೆ ಜೋಡಿಸುವ ನೆಪದಲ್ಲಿ ಮತದಾರರು ನೀಡಿದ ವಿಳಾಸದಲ್ಲಿ ವಾಸವಿಲ್ಲದ ಮತದಾರರನ್ನು ಅವರ ದಾಖಲೆಗಳು ಸರಿಯಿದ್ದರೂ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಅಲ್ಲದೆ, ಈ ಹಿಂದೆ ಹಲವು ಬಾರಿ ಒಂದೇ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದು, ಫಾರಂ ನಂ8 ಸಲ್ಲಿಸದಿದ್ದರೂ ಬೇರೆ ಮತಗಟ್ಟೆಗಳಿಗೆ ವರ್ಗಾಯಿಸಲಾಗಿದೆ. ಇದರಿಂದ ಸಾಕಷ್ಟು ಗೊಂದಲಗಳು ಉಂಟಾಗುತ್ತಿವೆ.ಈ ಬಗ್ಗೆ ಮತದಾರರಿಗೆ ಮಾಹಿತಿ ನೀಡುವ ಕೆಲಸವೂ ಸಂಬಂಧಪಟ್ಟ ಅಧಿಕಾರಿಗಳಿಂದ ಆಗಿಲ್ಲ. ಹಾಗಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಚುನಾವಣಾ ಆಯೋಗ ಆಗಿರುವ ತಪ್ಪನ್ನು ಸರಿಪಡಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.

ತುಮಕೂರು ನಗರಪಾಲಿಕೆಯ ವಾರ್ಡು ನಂ 06ರಲ್ಲಿರುವ ದಿಬ್ಬೂರು ವಾರ್ಡ್‍ನಲ್ಲಿರುವ ದೇವರಾಜ ಅರಸು ಬಡಾವಣೆಯ 1200 ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಸುಮಾರು 4500 ಮತದಾರರಿಗೆ ಮತಗಟ್ಟೆ ಸ್ಥಾಪಿಸಿಲ್ಲ,ಕೊಳಚೆ ಪ್ರದೇಶದಿಂದ ಅಲ್ಲಿಗೆ ಹೋಗಿರುವವರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ ಎನ್ನುವ ಅನುಮಾನ ಮೂಡುತ್ತಿದ್ದು,ದಿಬ್ಬೂರು ಜನವಸತಿ ಪ್ರದೇಶದಲ್ಲಿ ವಾಸಿಸುಸುತ್ತಿರುವವರಿಗಾಗಿ ಅಲ್ಲಿಯೇ ಮತಗಟ್ಟೆ ಸ್ಥಾಪಿಸಬೇಕು,ಮುಖಂಡರೊಂದಿಗೆ ಮತದಾರರ ಸಮೀಕ್ಷೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪಾಲಿಕೆ ಮಾಜಿ ಸದಸ್ಯ ಹಫೀಕ್ ಮಾತನಾಡಿ ನಮ್ಮ ವಾರ್ಡ್‍ನಲ್ಲಿ ಮುನ್ನೂರುಕ್ಕೂ ಹೆಚ್ಚು ಮತದಾರರನ್ನು ಬೇರೆ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ,ಇದೇ ರೀತಿ 35 ವಾರ್ಡ್‍ಗಳಲ್ಲಿಯೂ ಮತದಾರರನ್ನು ಸ್ಥಳಾಂತರಿಸಲಾಗಿದೆ,ಒಂದು ವಾರ್ಡ್‍ನಿಂದ ಮತ್ತೊಂದು ವಾರ್ಡ್‍ಗೆ ಸ್ಥಳಾಂತರ ಮಾಡುವ ಮೂಲಕ ಮತ ಮಾಡದಂತೆ ತಡೆಯುವ ಪ್ರಯತ್ನವಾಗಿದೆ ಎಂದರು

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ''ಬಿಜೆಪಿ ಪಕ್ಷದ ವಿರುದ್ಧ ಮತ ಚಲಾಯಿಸುವ ಮತದಾರರನ್ನು ಗುರುತಿಸಿ, ಅವರನ್ನು ಮತಪಟ್ಟಿಯಿಂದ ಕೈಬಿಟ್ಟು, ಅನ್ಯಾಯದ ಮಾರ್ಗದಿಂದ ಗೆಲುವು ಸಾಧಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.ಈಗಾಗಲೇ ನಮ್ಮ ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖಂಡರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾವು ಕೂಡ ಮತದಾರರ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ, ಕೈಬಿಟ್ಟಿರುವ ಮತದಾರರನ್ನು ಪುನಃ ಸೇರಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು'' ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ,ಮೇಯರ್ ಪ್ರಭಾವತಿ, ಮಾಜಿ ಉಪಮೇಯರ್ ರೂಪಾ ಶೆಟ್ಟಾಳಯ್ಯ, ಸೈಯದ್, ಆಟೋರಾಜು, ಶೆಟ್ಟಾಳಯ್ಯ, ಮೆಹಬೂಬ್ ಪಾಷಾ ಸೇರಿದಂತೆ ಇತರರಿದ್ದರು.

Similar News