ಮತಾಂತರದ ಆರೋಪ ಹೊತ್ತ ವ್ಯಕ್ತಿಯಿಂದ ಮತಾಂತರ ನಿಷೇಧ ಕಾಯ್ದೆ ಪ್ರಶ್ನಿಸಿ ಅರ್ಜಿ: ವಿವರಣೆ ಕೇಳಿದ ಹೈಕೋರ್ಟ್

Update: 2022-11-21 17:50 GMT

ಬೆಂಗಳೂರು, ನ.21: ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ಕಾಯ್ದೆಯನ್ನು(ಮತಾಂತರ ನಿಷೇಧ) ಪ್ರಶ್ನಿಸಿ ಮತಾಂತರದ ಆರೋಪ ಹೊತ್ತಿರುವ ವ್ಯಕ್ತಿಯೇ ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿರುವುದನ್ನು ಗಮನಿಸಿದ ಕೋರ್ಟ್ ಆ ವ್ಯಕ್ತಿಯಿಂದ ವಿವರಣೆಯನ್ನು ಕೇಳಿದೆ.

ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಕಡಬಾ ತಾಲೂಕಿನ ಹಲ್ಲಂಗೇರಿಯ ವಿಕ್ಟರ್ ಮಾರ್ಟಿನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿದಾರರು ಒಂದು ವಾರದಲ್ಲಿ ಪ್ರತಿಕ್ರಿಯಸಬೇಕೆಂದು ಸೂಚನೆ ನೀಡಿದೆ.

ಅರ್ಜಿದಾರರ ಪರ ವಾದಿಸಿದ ವಕೀಲರು, ಅನ್ಯ ಧರ್ಮಗಳನ್ನು ಗಮನದಲ್ಲಿರಿಸಿಕೊಂಡೇ, ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇಂಥ ಕಾನೂನು ಬಾಹಿರ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. 

ಸರಕಾರದ ಪರ ವಾದಿಸಿದ ಎಜಿ ಪ್ರಭುಲಿಂಗ ನಾವದಗಿ ಅವರು, ಅರ್ಜಿದಾರರ ವಿರುದ್ಧವೇ ಎರಡು ಬಲವಂತದ ಮತಾಂತರದ ಕ್ರಿಮಿನಲ್ ಪ್ರಕರಣಗಳಿವೆ. ಅವರು ಸಲ್ಲಿಸಿರುವ ಪಿಐಎಲ್ ಅನ್ನು ನ್ಯಾಯಾಲಯ ಯಾವುದೇ ಕಾರಣಕ್ಕೂ ಮಾನ್ಯ ಮಾಡಬಾರದು ಎಂದು ಪೀಠಕ್ಕೆ ಮನವಿ ಮಾಡಿದರು. 

ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೋರ್ಟ್‍ನಲ್ಲಿ ಪ್ರಶ್ನಿಸುವುದು, ಬಿಡುವುದು ನಿಮಗೆ ಬಿಟ್ಟ ವಿಚಾರವಾಗಿದೆ. ಆದರೆ, ಅಂಥ ವ್ಯಕ್ತಿ ಸಲ್ಲಿಸಿರುವ ಅರ್ಜಿಯನ್ನು ಪಿಐಎಲ್ ಆಗಿ ಪರಿಗಣಿಸಲಾಗದು. ಈ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ ಅರ್ಜಿದಾರರು ಪ್ರತಿಕ್ರಿಯಸಬೇಕೆಂದು ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿತು.  
 
          

Similar News