ಶುಲ್ಕವೊ, ಸುಲಿಗೆಯೊ? ಜನಾಕ್ರೋಶಕ್ಕೆ ಕಾರಣವಾಗುತ್ತಿರುವ ಟೋಲ್ ಸಂಗ್ರಹ ಕೇಂದ್ರಗಳು

Update: 2022-11-22 05:15 GMT

ಒಳ್ಳೆಯ ರಸ್ತೆ ನಿರ್ಮಿಸುವುದು ಸರಕಾರದ ಆದ್ಯ ಕರ್ತವ್ಯ ಎನ್ನುವ ಕಾಲ ಮುಗಿದಿದೆ. ಸರಕಾರಗಳು ಒಂದಿಷ್ಟೂ ಸದ್ದಿಲ್ಲದೆ ರಸ್ತೆಗಳನ್ನು ನಿರ್ಮಿಸುವ ಜವಾಬ್ದಾರಿಯಿಂದ ಮುಕ್ತವಾಗುತ್ತಿವೆ. ಅವುಗಳ ಬದಲಿಗೆ ನಿರ್ಮಾಣ ಕಂಪೆನಿಗಳ, ಗುತ್ತಿಗೆದಾರರ ಜೇಬು ಭರ್ತಿ ಮಾಡುವ ಹೊಸ ತಂತ್ರಗಳನ್ನು ಹೂಡುತ್ತಿವೆ. ರಸ್ತೆಗಳನ್ನು ನಿರ್ಮಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಸರಕಾರಗಳು, ಟೋಲ್ ಶುಲ್ಕ ವಸೂಲಿಗೆ ಮಾಡಿಕೊಂಡಿರುವ ನಿಯಮಗಳು ಮತ್ತಷ್ಟು ಜನವಿರೋಧಿಯಾಗಿವೆ. ವಾಹನದ ಖರ್ಚು, ಅದಕ್ಕೆ ತುಂಬಿಸಬೇಕಾದ ಇಂಧನಕ್ಕಿಂತ ಟೋಲ್ ಶುಲ್ಕವೇ ಹೆಚ್ಚಾಗುತ್ತಿದೆ ಎಂಬ ಸಂಕಟವನ್ನೂ ಜನಸಾಮಾನ್ಯರು ವ್ಯಕ್ತಪಡಿಸುವಂತಾಗಿದೆ. ದೂರದ ಪ್ರಯಾಣ ಮಾಡುವಾಗ ಟೋಲ್ ವೆಚ್ಚ ನೋಡಿಯೇ ತಲೆಕೆಡಿಸಿಕೊಳ್ಳುವ ಪರಿಸ್ಥಿತಿ ಇದೆ.

ಕಳೆದ ಅಕ್ಟೋಬರ್ 28ರಿಂದ ಮಂಗಳೂರಿನ ಸುರತ್ಕಲ್‌ನಲ್ಲಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಅಹೋರಾತ್ರಿ ಧರಣಿ ನಡೆಸುತ್ತಿದೆ. 60 ಕಿ.ಮೀ. ವ್ಯಾಪ್ತಿಯೊಳಗೆ ನಾಲ್ಕು ಟೋಲ್‌ಗೇಟ್‌ಗಳಿದ್ದು, ಸುರತ್ಕಲ್ ಟೋಲ್‌ಗೇಟ್ ಕಾನೂನು ಬಾಹಿರವಾಗಿ ನಡೆಯುತ್ತಿದೆ ಎಂಬುದು ಜನರ ಪ್ರತಿಭಟನೆಗೆ ಕಾರಣವಾಗಿತ್ತು. ಕಡೆಗೂ ಸರಕಾರ ಅಲ್ಲಿನ ಟೋಲ್ ಸಂಗ್ರಹವನ್ನು ಹಿಂಪಡೆದ ಆದೇಶ ನೀಡಿದೆ.

ಸುರತ್ಕಲ್ ಟೋಲ್‌ಗೇಟನ್ನು ಅಲ್ಲಿಗೆ ಕೆಲವೇ ಕಿ. ಮೀ.ಗಳ ದೂರದಲ್ಲಿರುವ ಹೆಜಮಾಡಿ ಟೋಲ್‌ಗೇಟ್ ಜೊತೆ ವಿಲೀನಗೊಳಿಸಲಾಗಿದೆ ಎಂದು ಹೇಳಲಾಗಿದೆ. ಆದರೂ ಅಕ್ರಮ ಸುರತ್ಕಲ್ ಟೋಲ್ ಸಂಗ್ರಹ ಇನ್ನೂ ನಿಂತಿಲ್ಲ. ಇನ್ನು ಹೆಜಮಾಡಿ ಟೋಲ್ ಜೊತೆ ಸುರತ್ಕಲ್ ಟೋಲ್ ವಿಲೀನಕ್ಕೂ ಜನರಿಂದ ವ್ಯಾಪಕ ವಿರೋಧವಿದೆ.

60ಕಿ.ಮೀ. ವ್ಯಾಪ್ತಿಯೊಳಗೆ ಒಂದಕ್ಕಿಂತ ಹೆಚ್ಚು ಟೋಲ್‌ಗೇಟ್ ಇರಕೂಡದೆಂಬುದು ನಿಯಮ. ವಿಪರ್ಯಾಸವೆಂದರೆ, ಇಂತಹ ನಿಯಮ ಉಲ್ಲಂಘಿಸಿದ್ದ ಸುರತ್ಕಲ್ ಟೋಲ್ ಥರದವೇ ಇನ್ನೂ 18 ಟೋಲ್‌ಗೇಟ್‌ಗಳು ಕರ್ನಾಟಕದಲ್ಲಿ ಇವೆ ಮತ್ತು ಅವು ಈವರೆಗೆ ಸುರತ್ಕಲ್ ಟೋಲ್‌ಗೇಟ್ ಹೇಗೆ ಹಣ ವಸೂಲಿ ಮಾಡುತ್ತಿತ್ತೊ ಅದೇ ರೀತಿಯಲ್ಲೇ ವಸೂಲಿ ನಡೆಸುತ್ತಿವೆ.

60 ಕಿ.ಮೀ. ವ್ಯಾಪ್ತಿಯೊಳಗೆ ಒಂದೇ ಟೋಲ್‌ಗೇಟ್ ಇರಬೇಕೆಂಬ ನಿಯಮ ಉಲ್ಲಂಘಿಸಿ ನಡೆಯುತ್ತಿರುವ ಟೋಲ್‌ಗೇಟ್‌ಗಳು ಇವು. ಹೀಗೆ ಅಕ್ರಮ ಟೋಲ್ ಇರುವ ರಾಜ್ಯಗಳಲ್ಲಿ ಕರ್ನಾಟಕದ್ದು ದೇಶದಲ್ಲೇ ಎರಡನೇ ಸ್ಥಾನ. ಹೀಗೆ ನಿಯಮ ಉಲ್ಲಂಘಿಸಿ ನಡೆಯುತ್ತಿರುವ 23 ಟೋಲ್‌ಗಳು ಉತ್ತರಪ್ರದೇಶದಲ್ಲಿದ್ದು, ಅದು ಮೊದಲ ಸ್ಥಾನದಲ್ಲಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ‘‘60 ಕಿ.ಮೀ. ವ್ಯಾಪ್ತಿಯಲ್ಲಿ ಒಂದೇ ಟೋಲ್ ಇರುವುದನ್ನು ಖಾತ್ರಿಪಡಿಸಿಕೊಳ್ಳ ಲಾಗುವುದು. ಎರಡನೇ ಟೋಲ್ ಇದ್ದಲ್ಲಿ ಮೂರು ತಿಂಗಳೊಳಗೆ ಅಂತಹವನ್ನು ಮುಚ್ಚಲಾಗುವುದು’’ ಎಂದು ಹೇಳಿಯೇ ಎಂಟು ತಿಂಗಳುಗಳು ಆಗಿಹೋದವು. ಒಂದು ಸುರತ್ಕಲ್ ಟೋಲ್ ಮುಚ್ಚಿಸುವುದಕ್ಕೇ ಜನರೆಲ್ಲ ಹಗಲೂ ರಾತ್ರಿ ಹೋರಾಟ ನಡೆಸಬೇಕಾಯಿತು. ಅದೂ ಇನ್ನೂ ನಿಂತಿಲ್ಲ.

ರಾಜ್ಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದ 1,300ಕಿ.ಮೀ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ದಿನಕ್ಕೆ ಸರಾಸರಿ 15 ಲಕ್ಷ. ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಕಿ.ಮೀ.ಗೆ ಪಾವತಿಸುವ ಶುಲ್ಕ 1.46ರೂ. ರಾಜ್ಯದ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಒಟ್ಟು 81 ಟೋಲ್‌ಗೇಟ್‌ಗಳಿವೆ.

ಇವುಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಬರುವ ಟೋಲ್ ಪ್ಲಾಝಾಗಳು 44. ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಲಯ ವ್ಯಾಪ್ತಿಯಲ್ಲಿ 6 ಟೋಲ್‌ಗೇಟ್‌ಗಳಿವೆ. ರಾಜ್ಯ ಹೆದ್ದಾರಿ ಕೆಆರ್‌ಡಿಸಿಎಲ್ ವ್ಯಾಪ್ತಿಯಲ್ಲಿ ಬರುವ ಟೋಲ್‌ಗೇಟ್‌ಗಳ ಸಂಖ್ಯೆ 31. ಇವುಗಳಲ್ಲಿ ಕೆಲವು ಟೋಲ್‌ಗೇಟ್‌ಗಳ ಗುತ್ತಿಗೆ ಅವಧಿ ಮುಗಿದಿದ್ದರೂ ಸುಂಕ ಸಂಗ್ರಹಿಸುತ್ತಲೇ ಇವೆ. ಅಂತಹ ಕಡೆಗಳಲ್ಲಿ ತಾಂತ್ರಿಕ ಕಾರಣಗಳನ್ನು ಮುಂದೆ ಮಾಡಿ, ಹಾಗೆಯೇ ಮುಂದುವರಿಸಲಾಗಿದೆ. ನಿತ್ಯವೂ ಲಕ್ಷಾಂತರ ವಾಹನಗಳು ಓಡಾಡುವ ಈ ರಸ್ತೆಯಲ್ಲಿ ಫಾಸ್ಟ್‌ಟ್ಯಾಗ್ ಮೂಲಕವೇ ಹಣ ವಸೂಲಿ ನಡೆದಿದೆ ಎನ್ನಲಾಗುತ್ತಿದೆ.

ಜನರಿಗೆ ಮಾತ್ರ ಇಲ್ಲಿ ಟೋಲ್ ಅವಧಿ ಮುಗಿದಿದ್ದು, ಇದು ತಾವು ಉಚಿತವಾಗಿ ಪ್ರಯಾಣಿಸಬಹುದಾದ ರಸ್ತೆ ಎಂಬುದೇ ತಿಳಿದಿಲ್ಲ. ಹೀಗೆ ಜನರ ಅರಿವಿಗೇ ಬಾರದಂಥ ಹಲವಾರು ವಿಚಾರಗಳು ಟೋಲ್ ಸಂಗ್ರಹಣೆ ವಿಚಾರದಲ್ಲಿ ಇವೆ.

ಹಲವು ಕಡೆ ಟೋಲ್ ರಸ್ತೆಯ ಸುತ್ತಲಿನ ಗ್ರಾಮಗಳ ನಿವಾಸಿಗಳಿಗೂ ಪರ್ಯಾಯ ಮಾರ್ಗಗಳೇ ಇಲ್ಲ. ಸ್ಥಳೀಯ ನಿವಾಸಿ ಎನ್ನುವ ದಾಖಲೆ ತೋರಿಸಿದ ಮೇಲೂ ಅವರಿಂದ ಬಲವಂತವಾಗಿ ಟೋಲ್ ವಸೂಲಿ ಮಾಡುವ ಘಟನೆಗಳು ನಡೆಯುತ್ತವೆ.

ಅನೇಕ ಟೋಲ್ ಸಂಗ್ರಹ ಕೇಂದ್ರಗಳು ರೌಡಿಗಳನ್ನು ಬಳಸಿಕೊಂಡು ವಸೂಲಿ ಮಾಡುತ್ತವೆಂಬ ಆರೋಪಗಳೂ ಇವೆ. ಹಲವು ಯೋಜನೆಗಳಲ್ಲಿ ಟೋಲ್ ಸಂಗ್ರಹ ಅವೈಜ್ಞಾನಿಕವಾಗಿದೆ. ರಸ್ತೆ ನಿರ್ಮಾಣಕ್ಕೆ ಮಾಡಿದ ವೆಚ್ಚಕ್ಕಿಂತ ಹೆಚ್ಚು ಆದಾಯ ಪಡೆದ ಬಳಿಕವೂ ವರ್ಷಗಳ ಕಾಲ ಶುಲ್ಕ ವಸೂಲಿ ನಡೆಸಲಾಗುತ್ತದೆ. ಯೋಜನೆಗೆ ಆದ ವೆಚ್ಚ ಎಷ್ಟು, ಶುಲ್ಕ ಸಂಗ್ರಹ ಎಷ್ಟು ವರ್ಷಗಳ ಕಾಲ ನಡೆಯುತ್ತದೆ, ನಿತ್ಯ ಆ ಮಾರ್ಗ ಬಳಸುವ ವಾಹನಗಳ ಸಂಖ್ಯೆ ಎಷ್ಟು -ಇವಾವುದರಲ್ಲೂ ಒಂದು ಪಾರದರ್ಶಕತೆ ಇಲ್ಲ. ಹೀಗೆ ಪಾರದರ್ಶಕತೆಯ ಕೊರತೆ ಮತ್ತು ಟೋಲ್ ಸಂಗ್ರಹಣೆಯಲ್ಲಿನ ಅವೈಜ್ಞಾನಿಕ ಕ್ರಮ ಇವು ಜನರ ಅಸಹನೆಗೆ ಕಾರಣವಾಗುತ್ತಿವೆ.

ಇನ್ನೊಂದೆಡೆ ಗುತ್ತಿಗೆ ಪಡೆದ ಕಂಪೆನಿಗಳು ಮಾಡುವ ಮುಚ್ಚುಮರೆ. ಸರಕಾರದ ನಿಯಮಗಳನ್ನು, ಆದೇಶಗಳನ್ನು ಗಾಳಿಗೆ ತೂರುವಷ್ಟು ಪ್ರಬಲ ಅವು. ನಿಯಮಬಾಹಿರ ಟೋಲ್‌ಗಳ ಮೂಲಕವೇ ಕೋಟ್ಯಂತರ ಹಣ ವಸೂಲಿ ಮಾಡುತ್ತಿರುವ ಅವುಗಳಿಗೆ ಲಂಗುಲಗಾಮೇ ಇಲ್ಲದಂತಾಗಿರುವ ಪರಿಸ್ಥಿತಿ. ಇದಕ್ಕೆಲ್ಲ ರಾಜಕಾರಣಿಗಳು ಮತ್ತು ಅಧಿಕಾರಿಗಳ ಬೆಂಬಲವಿದ್ದೇ ಇದೆ ಎಂಬ ಆರೋಪಗಳೂ ಮತ್ತೆ ಮತ್ತೆ ಕೇಳಿ ಬರುತ್ತಲೇ ಇರುತ್ತವೆ. ಅಂತೂ ಟೋಲ್‌ಗಳು ನಿಯತ್ತಿನ ಶುಲ್ಕ ಕೇಂದ್ರಗಳಾಗಿ ಉಳಿಯದೆ ಸುಲಿಗೆ ಕೇಂದ್ರಗಳಾಗಿಬಿಟ್ಟಿವೆ. 

ಕೆಲವೆಡೆ ಫ್ಲೈಓವರ್‌ಗಳಲ್ಲಿ ಸಂಚಾರ ನಿಂತು ಹಲವು ತಿಂಗಳುಗಳೇ ಕಳೆದರೂ, ಸರ್ವಿಸ್ ರಸ್ತೆಯಲ್ಲಿ ಓಡಾಡುವ ಭಾರೀ ವಾಹನಗಳಿಂದ ಶುಲ್ಕ ವಸೂಲಿ ನಡೆಯುತ್ತಿರುವುದಕ್ಕೂ ಆಕ್ರೋಶ ವ್ಯಕ್ತವಾಗಿದೆ. ಮತ್ತೆ ಕೆಲವೆಡೆ ಸರ್ವಿಸ್ ರಸ್ತೆಗಳೇ ಇಲ್ಲದಂತೆ ಮಾಡಿ, ಜನರು ಅನಿವಾರ್ಯವಾಗಿ ಟೋಲ್ ಮೂಲಕವೇ ಓಡಾಡಬೇಕಾದ ಸ್ಥಿತಿ ತಂದಿಡಲಾಗಿದೆ.

ಇದೆಲ್ಲವೂ ಸುಲಿಗೆಗೆ ಮಾಡಿಕೊಂಡ ಉಪಾಯಗಳು ಎಂಬ ಕೂಗು ಸಾರ್ವಜನಿಕರದು. ಕರಾವಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲೂ ರಸ್ತೆ ದುಸ್ಥಿತಿಯಲ್ಲಿದ್ದರೂ ಶುಲ್ಕ ವಸೂಲಿ ಮಾತ್ರ ನಿಲ್ಲುವುದಿಲ್ಲ ಎಂಬ ದೂರು ಸಾಮಾನ್ಯ. ಅಪೂರ್ಣ ಕಾಮಗಾರಿ ಮಧ್ಯೆಯೂ ಟೋಲ್ ವಸೂಲಿ, ಸೌಲಭ್ಯಗಳಿಲ್ಲದ ರಸ್ತೆಗಳಲ್ಲೂ ಟೋಲ್ ಸಂಗ್ರಹ ಅವ್ಯಾಹತವಾಗಿ ನಡೆದೇ ಇದೆ.

ಮಹಾರಾಷ್ಟ್ರದಲ್ಲಿ ಟೋಲ್‌ಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆದಾಗ ದೊಡ್ಡ ಪ್ರಮಾಣದಲ್ಲಿ ಅನಧಿಕೃತ ಟೋಲ್‌ಗಳನ್ನು ರದ್ದುಗೊಳಿಸಲಾಗಿತ್ತು. ಆದರೆ, ಬಹಳ ಕಡೆ ಇದು ಸಾಧ್ಯವಾಗುವುದಿಲ್ಲ. ಗುತ್ತಿಗೆ ಕಂಪೆನಿಗಳ ಪ್ರಭಾವ ಎಂಥದೆಂದರೆ, ಅದು ಜನಸಾಮಾನ್ಯರ ಕೂಗನ್ನು ಕೇಳಿಸದಂತೆ ಅಡಗಿಸಿಬಿಡುತ್ತದೆ.

ಎಷ್ಟೋ ಸಲ ಟೋಲ್‌ಗಳಲ್ಲಿ ಕೆಲಸ ಮಾಡುವ ಉತ್ತರ ಭಾರತದ ಸಿಬ್ಬಂದಿ ತಮಗೂ ಜನರಿಗೂ ಸಂಬಂಧವಿಲ್ಲವೆನ್ನುವಂತೆ, ವಸೂಲಿ ಮಾತ್ರವೇ ತಮ್ಮ ಕೆಲಸವೆಂಬಂತೆ ವರ್ತಿಸುವುದಿದೆ. ಇವರು ಸ್ಥಳೀಯರ ಅಹವಾಲುಗಳಿಗೆ ಸ್ಪಂದಿಸಲಾರರು. ಹೆಚ್ಚೇನಾದರೂ ಪ್ರಶ್ನಿಸಿದರೆ ತಮಗೆ ಏನು ಆದೇಶವಿದೆಯೋ ಅದನ್ನು ಪಾಲಿಸುತ್ತೇವೆ ಎಂಬ ನಿರ್ಲಿಪ್ತ ಉತ್ತರವೂ ಅವರ ಬಳಿ ಸಿದ್ಧವಿರುತ್ತದೆ. ಖಾಸಗಿಯವರ ಆಕ್ರಮಣ ಹೇಗೆ ಜನರಿಗೆ ಉತ್ತರದಾಯಿಯಾಗುವ ನಡೆಯಿಂದ ದೂರ ಸರಿಯುವ ವ್ಯವಸ್ಥೆಯನ್ನು ಸೃಷ್ಟಿಸಬಲ್ಲದು ಎಂಬುದಕ್ಕೆ ಟೋಲ್ ವ್ಯವಸ್ಥೆಯಲ್ಲಿನ ಆಕ್ರಮಣಕಾರಿ ರೀತಿಯೂ ಒಂದು ಉದಾಹರಣೆ.

ಟೋಲ್ ಸಂಗ್ರಹದಲ್ಲಿನ ಜನವಿರೋಧಿ ನಡೆ ಒಂದು ಬಗೆಯದಾದರೆ, ಟೋಲ್ ಸಂಗ್ರಹ ಸುಲಭವಾಗಲಿ, ಪ್ರಯಾಣಿಕರು ಕ್ಯೂನಲ್ಲಿ ನಿಂತು ಶುಲ್ಕ ಕಟ್ಟುವ ಸ್ಥಿತಿ ತಪ್ಪಲಿ ಎಂಬ ಉದ್ದೇಶದಿಂದ ತರಲಾದ ಫಾಸ್ಟ್ ಟ್ಯಾಗ್‌ನಂತಹ ಡಿಜಿಟಲ್ ವ್ಯವಸ್ಥೆ ಕೂಡ ದೋಷಪೂರಿತವಾಗಿ ಅನೇಕ ಸಲ ಖಾತೆಯಿಂದ ಹಣ ಕಡಿತವಾಗುವುದರ ಬಗ್ಗೆಯೂ ದೂರುಗಳಿವೆ. ಇದು ಇನ್ನೊಂದು ರೀತಿಯ ಆತಂಕ. ಅಲ್ಲದೆ ಇದರಲ್ಲೂ ಪ್ರವೇಶಿಸಿ ಗ್ರಾಹಕರ ಖಾತೆಯಲ್ಲಿರುವ ಹಣ ಎಗರಿಸುವ ಚಾಲಾಕಿ ಪಡೆಯೂ ಈ ಫಾಸ್ಟ್ ಟ್ಯಾಗ್ ವ್ಯವಸ್ಥೆಯ ಸುತ್ತ ಇರುವುದೂ ಅನೇಕ ಸಲ ಸುದ್ದಿಯಾಗಿದೆ.

ಎಲ್ಲ ಟೋಲ್ ಪ್ಲಾಝಾಗಳನ್ನು ತೆಗೆದು ಕ್ಯಾಮರಾ ಮೂಲಕವೇ ಟೋಲ್ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದೂ ಕೇಂದ್ರ ಸಚಿವ ಗಡ್ಕರಿ ಹೇಳಿದ್ದಾರೆ. ಹಲವಾರು ಬಗೆಯಲ್ಲಿ ಅಕ್ರಮಗಳು ನುಸುಳುತ್ತಿರುವ ಟೋಲ್‌ಗೆ ಕೊನೆ ಹಾಡಲು ಇದರಿಂದ ಸಾಧ್ಯವಾಗುವುದಾದರೆ ಜನರಿಗೆ ತುಸುವಾದರೂ ನೆಮ್ಮದಿ ಸಿಕ್ಕೀತು.

 ಅನಧಿಕೃತ ಟೋಲ್‌ಗೇಟ್‌ಗಳು 

ಕರ್ನಾಟಕದಲ್ಲಿನ 18 ಅನಧಿಕೃತ ಟೋಲ್‌ಗೇಟ್‌ಗಳಲ್ಲಿ ಕೆಲವು ಇನ್ನೊಂದು ಟೋಲ್‌ಗೇಟ್ 50ರಿಂದ 59 ಕಿ.ಮೀ. ಅಂತರದಲ್ಲೇ ಇದ್ದರೆ, ಹೆಚ್ಚಿನವು ಕೇವಲ11ರಿಂದ 35 ಕಿ.ಮೀ. ಅಂತರದಲ್ಲಿದ್ದು, ಹಣ ವಸೂಲಿಯಲ್ಲಿ ತೊಡಗಿವೆ. ಮಂಗಳೂರಿನಲ್ಲಿ 45 ಕಿ.ಮೀ. ವ್ಯಾಪ್ತಿಯೊಳಗೇ 4 ಟೋಲ್‌ಗೇಟ್‌ಗಳಿದ್ದುದೇ ಅಲ್ಲಿನ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿ, ಈಗ ಹೆಜಮಾಡಿ ಟೋಲ್ ನಿಂದ ಕೇವಲ 10.2 ಕಿ.ಮೀ. ಅಂತರದಲ್ಲಿದ್ದ ಸುರತ್ಕಲ್ ಟೋಲ್ ಸಂಗ್ರಹ ರದ್ದುಗೊಳಿಸಿದ ಆದೇಶವಾಗಿದೆ.

ಆದರೆ, 32 ಕಿ.ಮೀ. ಅಂತರದಲ್ಲಿರುವ ತಲಪಾಡಿ-ಸುರತ್ಕಲ್, 49 ಕಿ.ಮೀ. ಅಂತರದಲ್ಲಿರುವ ಹೆಜಮಾಡಿ-ಗುಂಡ್ಮಿ, 49 ಕಿ.ಮೀ. ಅಂತರದಲ್ಲಿರುವ ಹೊಳೆಗದ್ದೆ-ಬೆಳಕೇರಿ, 59 ಕಿ.ಮೀ. ಅಂತರದಲ್ಲಿರುವ ಸಾಸ್ತಾನ-ಶಿರೂರು, 12 ಕಿ.ಮೀ. ಅಂತರದಲ್ಲಿರುವ ಕುಲುಮೆ ಪಾಳ್ಯ-ಬೆಂಗಳೂರು, 21 ಕಿ.ಮೀ. ವ್ಯಾಪ್ತಿಯಲ್ಲಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಟೋಲ್ ಪ್ಲಾಝಾಗಳು, ಕೇವಲ 7 ಅಥವಾ 8 ಕಿ.ಮೀ. ಅಂತರದಲ್ಲಿರುವ ನೆಲಮಂಗಲ ಮೊದಲಾದ ಕ್ಷೇತ್ರಗಳಲ್ಲಿನ ಟೋಲ್‌ಗಳು ಸಾರ್ವಜನಿಕರಿಂದ ನಿತ್ಯವೂ ಸುಲಿಗೆ ಮಾಡುತ್ತಿರುವ ಹಣವೆಷ್ಟು? ಜನಪ್ರತಿನಿಧಿಗಳು ಈ ವಿಚಾರವನ್ನು ಅಧಿವೇಶನದ ವೇಳೆ ಪ್ರಸ್ತಾಪಿಸಿದರೂ, ಕೈಗೊಂಡ ಕ್ರಮಗಳೇನು? ಜನಸಾಮಾನ್ಯನಿಂದ ಹಣ ವಸೂಲಿ ಮಾಡುವುದು ನಿಂತಿದೆಯೆ?

 ಟೋಲ್ ನಿಯಮಗಳನ್ನು ಮರೆಮಾಚುವ ಗುತ್ತಿಗೆದಾರರು 

  • ರಾಷ್ಟ್ರೀಯ ಹೆದ್ದಾರಿಯಲ್ಲಿ ಪೀಕ್ ಅವರ್‌ನಲ್ಲಿ ಪ್ರತೀ ವಾಹನವು 10 ಸೆಕೆಂಡ್‌ಗಳಿಗಿಂತ ಹೆಚ್ಚು ಕಾಯುವಂತಿಲ್ಲ.
  •  100 ಮೀಟರ್‌ಗಿಂತ ಹೆಚ್ಚು ದೂರ ವಾಹನಗಳ ಕ್ಯೂ ಇದ್ದರೆ ಟೋಲ್ ಪ್ಲಾಝಾಗಳಲ್ಲಿ ಟೋಲ್ ಫೀ ಕಟ್ಟಬೇಕಾಗಿಲ್ಲ.
  •  ಟೋಲ್ ಪ್ಲಾಝಾಗಳಿಂದ 100 ಮೀಟರ್ ದೂರದಲ್ಲಿ ಹಳದಿ ರೇಖೆಯನ್ನು ಎಳೆದಿರಲಾಗುತ್ತದೆ. ಆ ರೇಖೆಗಿಂತಲೂ ಹೆಚ್ಚು ವಾಹನಗಳು ಕ್ಯೂನಲ್ಲಿದ್ದರೆ ಆ ವಾಹನಗಳಿಗೆ ಟೋಲ್‌ನಲ್ಲಿ ತೆರಿಗೆ ಪಾವತಿಸಬೇಕಾಗಿಲ್ಲ. ಆ ವಾಹನಗಳು ಹಾದುಹೋಗಲು ಅನುಮತಿ ಕೊಡಬೇಕು. ಆದರೆ ಈ ಸಂಗತಿಯ ಬಗ್ಗೆ ಸಾರ್ವಜನಿಕರಿಗೆ ಎಷ್ಟು ಗೊತ್ತಿದೆ ಎಂಬುದೇ ಪ್ರಶ್ನೆ.
  •  ಟೋಲ್‌ನ ಮತ್ತೊಂದು ನಿಯಮದ ಪ್ರಕಾರ, ಟೋಲ್‌ಗೇಟ್ ದಾಟಿದ ಬಳಿಕ ಅದೇ ಟೋಲ್‌ನಲ್ಲಿ 12 ತಾಸುಗಳ ಒಳಗೆ ವಾಪಸ್ ಬಂದಲ್ಲಿ ಮತ್ತೆ ಟೋಲ್ ಪಾವತಿಸಬೇಕಿಲ್ಲ. ಈ ವಿಚಾರದ ಬಗ್ಗೆಯೂ ಬಹುತೇಕರಿಗೆ ಅರಿವಿರುವುದಿಲ್ಲ. ಟೋಲ್ ಗುತ್ತಿಗೆದಾರರು ಈ ವಿಚಾರವನ್ನು ಮುಚ್ಚಿಟ್ಟು, 12 ಗಂಟೆಯೊಳಗೆ ಅದೇ ಟೋಲ್‌ನಲ್ಲಿ ವಾಪಸ್ ಬಂದವರಿಂದಲೂ ಶುಲ್ಕ ವಸೂಲಿ ಮಾಡುತ್ತಾರೆ. ನಿತ್ಯವೂ ಲಕ್ಷಾಂತರ ವಾಹನ ಸವಾರರು ಹೀಗೆ ಸುಲಿಗೆಗೆ ಒಳಗಾಗುತ್ತಿದ್ದಾರೆ.