ಅರೆಸೇನಾಪಡೆ ಯೋಧರ ಕಡೆಗಣನೆ: ಡಿ.13ರಂದು ಬೆಂಗಳೂರು ಚಲೋ ಹೋರಾಟ ನಡೆಸಲು ನಿರ್ಧಾರ

Update: 2022-11-22 10:34 GMT

ಮಡಿಕೇರಿ,ನ.22: ಕೇಂದ್ರ ಮತ್ತು ರಾಜ್ಯ ಸರಕಾರ ಅರೆಸೇನಾಪಡೆ ಯೋಧರು ಹಾಗೂ ಮಾಜಿ ಯೋಧರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಅರೆಸೇನಾಪಡೆ ನಿವೃತ್ತ ಯೋಧರ ಒಕ್ಕೂಟ, ಡಿ.13ರಂದು ಬೆಂಗಳೂರು ಚಲೋ ಹೋರಾಟದ ಮೂಲಕ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ನಿರ್ಧರಿಸಿರುವುದಾಗಿ ತಿಳಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.

ಡಿ.13ರಂದು ಸಂಸತ್ ಭವನದ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ವಿಫಲಗೊಳಿಸುವ ಮೂಲಕ ಸಂಸದರು ಹಾಗೂ ರಾಜಕೀಯ ಮುಖಂಡರುಗಳನ್ನು ಸಿಆರ್‌ಪಿಎಫ್ ಯೋಧರು ರಕ್ಷಿಸಿದ್ದರು. ಅಲ್ಲದೆ ಅನೇಕ ಯೋಧರು ಸಾಹಸ ಮೆರೆದು ಹುತಾತ್ಮರಾಗಿದ್ದಾರೆ. ಇದನ್ನು ಸರ್ಕಾರಕ್ಕೆ ನೆನಪು ಮಾಡಿಕೊಡುವ ಉದ್ದೇಶದಿಂದ ಡಿ.13ರಂದೇ ಧರಣಿ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ತಿಳಿಸಿದರು.

ಸೇನಾಪಡೆಯ ಮಾಜಿ ಯೋಧರ ಬೇಡಿಕೆಗಳ ಬಗ್ಗೆ ಜಿಲ್ಲಾಡಳಿತ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡದೆ ನಮ್ಮ ಮನವಿಗಳನ್ನು ಕಡೆಗಣಿಸಲಾಗಿದೆ. ಸಂಘದ ಕಚೇರಿ ಮತ್ತು ಕ್ಯಾಂಟೀನ್ ವ್ಯವಸ್ಥೆಗಾಗಿ ಕರ್ಣಂಗೇರಿ ಗ್ರಾಮದ ಸ. ನಂ.10/2ರ 0.20 ಏಕರೆ ಜಾಗವು ಕಳೆದ 10 ವರ್ಷಗಳಿಂದ ಸಂಘದ ಸ್ವಾಧೀನದಲ್ಲಿದೆ. ಎರಡು ಬಾರಿ ಸರ್ವೆ ಮಾಡಿ ವಿಂಗಡಿಸಲಾಗಿದ್ದರೂ ಮಂಜೂರು ಮಾಡದೆ ನಿರ್ಲಕ್ಷ ವಹಿಸಲಾಗಿದೆ. ನಮ್ಮ ನೆರೆ ಜಿಲ್ಲೆ ಹಾಸದಲ್ಲಿ ಕೇವಲ 150 ಸದಸ್ಯರ ಅರೆಸೇನಾಪಡೆ ಮಾಜಿ ಯೋಧರ ಸಂಘಕ್ಕೆ ಅಲ್ಲಿನ ಜಿಲ್ಲಾಡಳಿತ, ಜನ ಪ್ರತಿನಿಧಿಗಳು ಗೌರವ ನೀಡಿ ಜಾಗ ಮಂಜೂರು ಮಾಡಿ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಯೋಧರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.

 ಕೊಡಗು ಅತಿಹೆಚ್ಚು ಅರೆಸೇನಾಪಡೆ ಮಾಜಿ ಯೋಧರು ಹಾಗೂ ಮಹಿಳಾ ಯೋಧರನ್ನು ಹೊಂದಿದ್ದರೂ ಕ್ಯಾಂಟೀನ್ ಮತ್ತು ಆಸ್ಪತ್ರೆಯ ಸೌಲಭ್ಯವನ್ನು ಒದಗಿಸಿಲ್ಲ. ವಸತಿ, ನಿವೇಶನ ಮತ್ತು ಜಮೀನು ಮಂಜೂರಾತಿಗಾಗಿ ಅನೇಕ ಮಾಜಿ ಯೋಧರು ಅರ್ಜಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಸ್ಪಂದನೆ ದೊರೆತ್ತಿಲ್ಲ. ಪ್ರತಿವರ್ಷ ಪೊಲೀಸ್ ಹುತಾತ್ಮರ ದಿನ ಆಚರಿಸುತ್ತಿದ್ದು, ಅರೆಸೇನಾಪಡೆ ಮಾಜಿ ಯೋಧರನ್ನು ಕಡೆಗಣಿಸಿ ಸಂಬಂಧಪಡದವರನ್ನು ಆಹ್ವಾನಿಸಿ ಆಚರಣೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಸಿಆರ್‌ಪಿಎಫ್ ಯೋಧರ ಬಲಿದಾನವನ್ನು ಪೊಲೀಸ್ ಹುತಾತ್ಮರ ದಿನವನ್ನಾಗಿ ಆಚರಿಸುತ್ತಿರುವ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

ಮಹಾಸಭೆ: ಅರೆಸೇನಾಪಡೆ ನಿವೃತ್ತ ಯೋಧರ ಒಕ್ಕೂಟದ 10ನೇ ವಾರ್ಷಿಕ ಮಹಾಸಭೆ ನ.25ರಂದು ಮಡಿಕೇರಿಯ ಪೊಲೀಸ್ ‘‘ಮೈತ್ರಿ’’ ಸಮುದಾಯ ಭವನದ ಸಂಭಾಂಗಣದಲ್ಲಿ ನಡೆಯಲಿದೆ. ಅರೆ ಸೇನಾಪಡೆಯ ಮಾಜಿ ಯೋಧರು, ಸೇವಾನಿರತ ಕುಟುಂಬದ ಅವಲಂಬಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಮುಖರು ಮನವಿ ಮಾಡಿದರು.

ಸಂಘದ ಸದಸ್ಯತ್ವವನ್ನು ಪಡೆಯದೆ ಇರುವ ಅರೆಸೇನಾಪಡೆಯ ಮಾಜಿ ಯೋಧರು ಸದಸ್ಯತ್ವವನ್ನು ಪಡೆದುಕೊಂಡು ಸಂಘದ ಬೆಳವಣಿಗೆಗೆ ಸಹಕರಿಸಬೇಕೆಂದು ಇದೇ ಸಂದರ್ಭ ತಿಳಿಸಿದರು.

ಕೂಟದ ಜಿಲ್ಲಾ ಕಾರ್ಯದರ್ಶಿ ನೂರೇರ ಎಂ.ಭೀಮಯ್ಯ, ನಿರ್ದೇಶಕ ಎ.ಟಿ.ಉತ್ತಯ್ಯ, ಸಲಹೆಗಾರ ಕೆ.ಎಸ್.ಆನಂದ ಹಾಗೂ ಮಡಿಕೇರಿ ತಾಲ್ಲೂಕು ಘಟಕದ ಕಾರ್ಯದರ್ಶಿ ಸಿ.ಜಿ.ಸಿದ್ದಾರ್ಥ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

Similar News