ಸರಕಾರ ಗಡಿ ವಿವಾದದ ಪರಿಸ್ಥಿತಿಯ ಗಂಭೀರತೆ ಅರಿತಂತಿಲ್ಲ: ದಿನೇಶ್ ಗುಂಡೂರಾವ್

Update: 2022-11-22 11:49 GMT

ಬೆಂಗಳೂರು, ನ.22: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನ.23ರಂದು ಸುಪ್ರೀಂಕೋರ್ಟ್‍ನಲ್ಲಿ ಅಂತಿಮ ವಿಚಾರಣೆಯಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ  ಶಿಂಧೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಆದರೆ ಇಲ್ಲಿ ರಾಜ್ಯ ಸರಕಾರ ಗಡಿ ವಿವಾದದ ಪರಿಸ್ಥಿತಿಯ ಗಂಭೀರತೆ ಅರಿತಂತಿಲ್ಲ. ಗಡಿ ವಿವಾದದ ಸಾಧಕ ಬಾಧಕಗಳ ಕುರಿತು ಚಿಂತನೆ ಮಾಡಿಲ್ಲ ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬೆಳಗಾವಿ ಗಡಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‍ನಲ್ಲಿ ಸಮರ್ಥ ವಾದ ಮಂಡಿಸಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತನ್ನ ಮುಂದಿನ ನಡೆ ಬಗ್ಗೆ ಚರ್ಚಿಸಬೇಕು. ಆದರೆ ಇಲ್ಲಿಯವರೆಗೂ ಸರಕಾರದಿಂದ ಆ ಪ್ರಯತ್ನ ನಡೆದೇ ಇಲ್ಲ. ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರಕ್ಕಿರುವ ಆಸಕ್ತಿ ಈ ಸರಕಾರಕ್ಕೆ ಯಾಕಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ತಗಾದೆ ಎತ್ತುತ್ತಲೇ ಇದೆ. ಮಹಾಜನ್ ಆಯೋಗದ ರಚನೆಗೆ ಒತ್ತಾಯ ಮಾಡಿದ್ದೇ ಮಹಾರಾಷ್ಟ್ರ. ಆದರೆ ಮಹಾಜನ್ ಆಯೋಗ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಎಂಬ ವರದಿ ನೀಡಿದೆ. ಆದರೆ ಮಹಾಜನ್ ಆಯೋಗದ ವರದಿ ತಮಗೆ ಪೂರಕವಾಗಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರ ವರದಿ ನಿರಾಕರಿಸುತ್ತಿದೆ. ಈ ಬಗ್ಗೆಯೂ ಸುಪ್ರೀಂ ಕೋರ್ಟ್ ಗಮನ ಸೆಳೆಯಬೇಕಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಳಗಾವಿ ಅಖಂಡ ಕರ್ನಾಟಕದ ಅವಿಭಾಜ್ಯ ಅಂಗ. ಯಾವುದೇ ಕಾರಣಕ್ಕೂ ಬೆಳಗಾವಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಬೊಮ್ಮಾಯಿಯವರು ಬೆಳಗಾವಿ ಗಡಿ ವಿವಾದವನ್ನು ಲಘುವಾಗಿ ಪರಿಗಣಿಸಬಾರದು. ಅಂತಿಮ ವಿಚಾರಣೆಯಲ್ಲಿ ಪೂರ್ವ ತಯಾರಿ ಇಲ್ಲದೆ ಹೋದರೆ ಮುಖಭಂಗ ಎದುರಿಸಬೇಕಾಗುತ್ತದೆ. ಹಾಗಾಗಿ ಸರಕಾರ ಈ ಕೂಡಲೇ ಸರ್ವಪಕ್ಷ ಸಭೆ ಕರೆದು ಚರ್ಚಿಸಲಿ ಎಂದು ಅವರು ಸಲಹೆ ನೀಡಿದ್ದಾರೆ.

Similar News