ಶಿಕ್ಷಕರ ನೇಮಕಾತಿಯಲ್ಲಿ ಆದಾಯ ಪ್ರಮಾಣ ಪತ್ರದ ಗೊಂದಲ: ವಿವಾಹಿತ ಮಹಿಳಾ ಅಭ್ಯರ್ಥಿಗಳಿಗೆ ಪತಿಯ ಆದಾಯ ಪತ್ರ ಕಡ್ಡಾಯ

Update: 2022-11-22 13:28 GMT

ಬೆಂಗಳೂರು, ನ.22: ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಿದ ವಿವಾಹಿತ ಮಹಿಳಾ ಅಭ್ಯರ್ಥಿಗಳ ಆದಾಯ ಪ್ರಮಾಣ ಪತ್ರದಲ್ಲಿ ಗೊಂದಲಗಳು ಉಂಟಾಗಿದ್ದು, ಸುಮಾರು 2 ಸಾವಿರ ಮಹಿಳಾ ಅಭ್ಯರ್ಥಿಗಳಿಗೆ ಉದ್ಯೋಗ ವಂಚನೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಮಹಿಳಾ ಅಭ್ಯರ್ಥಿಗಳು ಮದುವೆಯಾಗಿದ್ದರೆ, ಗಂಡನ ಆದಾಯ ಪ್ರಮಾಣಪತ್ರವನ್ನು ಸಲ್ಲಿಬೇಕಾಗುತ್ತದೆ ಎಂದು ಸರಕಾರ ತಿಳಿಸುತ್ತಿದೆ. ಆದರೆ ಅದೇ ಸರಕಾರ ವಿತರಿಸಿದ ಆದಾಯ ಪ್ರಮಾಣ ಪತ್ರವು ಐದು ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ಹಾಗಾಗಿ ವಿವಾಹಕ್ಕೆ ಮುನ್ನ ಅರ್ಜಿ ಸಲ್ಲಿಸಿ, ಪಡೆದ ಆದಾಯ ಪ್ರಮಾಣ ಪತ್ರವು ತಂದೆಯ ಹೆಸರಿನಲ್ಲಿದ್ದು, ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವಾಗ ವಿವಾಹಿತ ಮಹಿಳೆಯರು ಅದನ್ನು ಅಪ್‍ಲೋಡ್ ಮಾಡಿರುವುದಾಗಿ ಅವಕಾಶ ವಂಚಿತ ಅಭ್ಯರ್ಥಿಗಳು ತಿಳಿಸಿದ್ದಾರೆ.

ಗಂಡನ ಆದಾಯ ಪ್ರಮಾಣ ಪತ್ರ ಸಲ್ಲಿಕೆ ಮಾಡದಿರುವುದು ಸಮಸ್ಯೆಗೆ ಕಾರಣವಾಗಿದ್ದು, ಶಿಕ್ಷಕ ನೇಮಕಾತಿಯ 1:2 ಪಟ್ಟಿಯಲ್ಲಿದ್ದ 2 ಸಾವಿರ ಮಹಿಳೆಯರನ್ನು ಸೂಕ್ತವಾದ ಆದಾಯ ಪ್ರಮಾಣ ಪತ್ರವನ್ನು ನೀಡಿಲ್ಲ ಎಂದು 1:1 ಪಟ್ಟಯಿಂದ ಕೈಬಿಡಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕಾರಣವಾಗಿದ್ದು, ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಶಿಕ್ಷಕರಾಗುವ ಎಲ್ಲ ಅರ್ಹತೆ ಇದ್ದರೂ, ಮದುವೆ ಆದ ಮಹಿಳೆಯರಿಗೆ ಗಂಡನ ಜಾತಿ ಆದಾಯ ಪ್ರಮಾಣ ಪತ್ರ ಇಲ್ಲ ಎನ್ನುವ ನೆಪ ಇಟ್ಟುಕೊಂಡು ಅವಕಾಶ ವಂಚಿತರನ್ನಾಗಿ ಮಾಡಲಾಗುತ್ತಿದೆ. ಶಿಕ್ಷಕರ ನೇಮಕಾತಿ ನೋಟಿಫಿಕೇಟಿನ್‍ನಲ್ಲಿ ಆಗಲೀ ಅಥವಾ ವೇರಿಫಿಕೇಶನ್ ಸಂದರ್ಭದಲ್ಲಾಗಲೀ ಗಂಡನ ಜಾತಿ ಆದಾಯ ಪತ್ರ ಸಲ್ಲಿಸಬೇಕು ಎಂದು ತಿಳಿಸಿರಲಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

''ವಿವಾಹವಾಗುವ ಮುನ್ನ ಶಿಕ್ಷಕರ ನೇಮಕಾತಿಗೆ ಅರ್ಜಿ ಹಾಕಿದ್ದಲ್ಲಿ, ತಂದೆಯ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ವಿವಾಹವಾಗಿದ್ದರೂ, ತಂದೆಯ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರೆ, ಯಾವುದೇ ಸಮಸ್ಯೆ ಇಲ್ಲ. ಆದರೆ ವಿವಾಹವಾದ ಬಳಿಕ ಶಿಕ್ಷಕ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದರೆ, ಗಂಡನ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿದೆ. ಏಕೆಂದರೆ ಹಿಂದು ಸಾಂಪ್ರದಾಯದ ಪ್ರಕಾರ ವಿವಾಹವಾದ ಮಹಿಳೆಯು ಗಂಡನ ಮನೆಯಲ್ಲಿಯೇ ಇರುತ್ತಾಳೆ''.

- ಬಿ.ಸಿ. ನಾಗೇಶ್, ಶಿಕ್ಷಣ ಸಚಿವ

---------------------------------

''ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಅವಿವಾಹಿತರು ತಂದೆಯ ಆದಾಯ, ವಿವಾಹಿತರು ಗಂಡನ ಆದಾಯ ವಿವರವನ್ನು ಸಲ್ಲಿಸಬೇಕು. ಹಲವು ವಿವಾಹಿತ ಮಹಿಳೆಯರು ತಮ್ಮ ತಂದೆಯ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ. ಇದರಿಂದ ಅವರ ಅರ್ಜಿಗಳನ್ನು ತಿಸ್ಕರಿಸಲಾಗಿದೆ''

ಆರ್. ವಿಶಾಲ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತ

------------------------------

ಶಿಕ್ಷಕರ ನೇಮಕಾತಿಯಲ್ಲಿ ವಿವಾಹಿತ ಮಹಿಳಾ ಅಭ್ಯರ್ಥಿಗಳ ಜಾತಿ, ಆದಾಯ ಪ್ರಮಾಣ ಪತ್ರದ ಕುರಿತು ಸ್ಪಷ್ಟ ನಿರ್ದೇಶನ ನೀಡದ ಶಿಕ್ಷಣ ಇಲಾಖೆಯ ತಪ್ಪಿಗೆ ಅಭ್ಯರ್ಥಿಗಳಿಗೇಕೆ ಆಯ್ಕೆ ಪಟ್ಟಿಯಿಂದ ಕೈಬಿಡುವ ಶಿಕ್ಷೆ? ದುರಹಂಕಾರ ತುಂಬಿದ ಅಪ್ರಬುದ್ಧ ಸಚಿವ ಬಿ.ಸಿ.ನಾಗೇಶ್ ಹಿಂದುಳಿದ ಸಮುದಾಯಗಳ ಮಹಿಳೆಯರಿಗೆ ಉದ್ದೇಶಪೂರ್ವಕ ಅನ್ಯಾಯವೆಸಗುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

Similar News