ದತ್ತು ಮಕ್ಕಳೂ ಅನುಕಂಪದ ಆಧಾರದ ಉದ್ಯೋಗಕ್ಕೆ ಅರ್ಹರು: ಹೈಕೋರ್ಟ್

Update: 2022-11-22 14:32 GMT

ಬೆಂಗಳೂರು, ನ.22: ಅನುಕಂಪದ ಆಧಾರದಲ್ಲಿ ಪೋಷಕರ ಉದ್ಯೋಗಕ್ಕೆ ದತ್ತು ಮಕ್ಕಳೂ ಅರ್ಹರು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ (high court of karnataka), ಉದ್ಯೋಗ ನೀಡುವಲ್ಲಿ ಸ್ವಂತ ಮಕ್ಕಳು ಮತ್ತು ದತ್ತು ಮಕ್ಕಳು ಎಂಬುದಾಗಿ ತಾರತಮ್ಯ ಮಾಡಿದರೆ ದತ್ತು ಸ್ವೀಕಾರದ ಮೂಲ ಉದ್ದೇಶ ಈಡೇರುವುದಿಲ್ಲ ಎಂದು ತಿಳಿಸಿದೆ.

ದತ್ತು ಪುತ್ರನಿಗೆ ಅನುಕಂಪದ ಆಧಾರದ ಉದ್ಯೋಗ ಲಭ್ಯವಾಗುವುದಿಲ್ಲ ಎಂದು ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಗಿರೀಶ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ದತ್ತು ಪುತ್ರನಿಗೆ ಅನುಕಂಪದ ಉದ್ಯೋಗ ನೀಡುವಂತೆ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯುವ ಸಂದರ್ಭದಲ್ಲಿ ದತ್ತು ಮಕ್ಕಳು ಮತ್ತು ಸ್ವಂತ ಮಕ್ಕಳು ಎಂಬ ವ್ಯತ್ಯಾಸವನ್ನು ನೋಡಿದಲ್ಲಿ ದತ್ತು ತೆಗೆದುಕೊಳ್ಳುವ ಉದ್ದೇಶ ಈಡೇರುವುದಿಲ್ಲ ಎಂದು ನ್ಯಾಯಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ.

ಬನಹಟ್ಟಿಯ ಜೆಎಂಎಫ್‍ಸಿ ನ್ಯಾಯಾಲಯದ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಕಚೇರಿಯಲ್ಲಿ ವಿನಾಯಕ ಎಂ ಮುತ್ತಟ್ಟಿ ಎಂಬುವರು ದಲಾಯತ್(ಗ್ರೂಪ್ ಡಿ ನೌಕರ)ಆಗಿ ಸೇವೆ ಸಲ್ಲಿಸುತ್ತಿದ್ದು, ಮುತ್ತಟ್ಟಿ 2011ರಲ್ಲಿ ಗಿರೀಶ್ ಅವರನ್ನು ದತ್ತು ಪಡಿದುಕೊಂಡಿದ್ದರು. ಅಲ್ಲದೇ, ದತ್ತು ಸ್ವೀಕಾರ ಪತ್ರವನ್ನು ಬರೆಸಿದ್ದರು. ಆದರೆ, ಕಾರಣಾಂತರಗಳಿಂದ 2018ರಲ್ಲಿ ನಿಧನರಾಗಿದ್ದರು. ಅವರ ಹುದ್ದೆಯನ್ನು ಅನುಕಂಪದ ಆಧಾರದಲ್ಲಿ ನೀಡುವಂತೆ ಕೋರಿ ಅವರ ದತ್ತು ಪುತ್ರ ಗಿರೀಶ್ ಪ್ರಾಸಿಕ್ಯೂಷನ್ ಇಲಾಖೆಗೆ ಮನವಿ ಸಲ್ಲಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಇಲಾಖೆ, ದತ್ತು ಪುತ್ರನಿಗೆ ಅನುಕಂಪದಲ್ಲಿ ನೇಮಕಾತಿ ಮಾಡಿಕೊಳ್ಳುವುದಕ್ಕೆ ನಿಯಮಗಳಲ್ಲಿ ಅವಕಾಶವಿಲ್ಲ ಎಂಬ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಗಿರೀಶ್ ಹೈಕೋರ್ಟ್‍ನ ಏಕಸದಸ್ಯ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಪೀಠ ಅರ್ಜಿ ವಜಾಗೊಳಿಸಿ ಪ್ರಾಸಿಕ್ಯೂಷನ್ ಇಲಾಖೆಯ ಆದೇಶನ್ನು ಎತ್ತು ಹಿಡಿದಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.  

Similar News