ಅಮೃತ ನಗರೋತ್ಥಾನ ಯೋಜನೆ; SC/ST ಗುತ್ತಿಗೆದಾರರಿಗೆ ಅನ್ಯಾಯ ಆಗುತ್ತಿದೆ ಎಂದು ಅರ್ಜಿ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2022-11-22 16:00 GMT

ಬೆಂಗಳೂರು, ನ.22: ‘ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ'ಯ ಕಾಮಗಾರಿಗಳಿಗೆ ಬಿಬಿಎಂಪಿ ಸೇರಿದಂತೆ ರಾಜ್ಯದ ಉಳಿದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ಯಾಕೇಜ್ ಮೊತ್ತಕ್ಕೆ ಮಿತಿ ಹೇರಿದ್ದರಿಂದ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್. ಮಹದೇವಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪಿ.ಬಿ ವರಾಳೆ ಅವರ ನೇತತ್ವದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ನಗರಾಭಿವದ್ಧಿ ಇಲಾಖೆ, ಆರ್ಥಿಕ ಇಲಾಖೆ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿ.13ಕ್ಕೆ ಮುಂದೂಡಿತು. ಅರ್ಜಿದಾರರ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ ವಾದ ಮಂಡಿಸಿದರು.

ಸರಕಾರದ ಟೆಂಡರ್‍ಗಳಲ್ಲಿ 50 ಲಕ್ಷದವರೆಗಿನ ಕಾಮಗಾರಿಗಳಲ್ಲಿ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಶೇ.24ರಷ್ಟು ಮೀಸಲಾತಿ ನೀಡಿ 2017ರಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಆದರೆ, `ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ’ಯಡಿ ಬಿಬಿಎಂಪಿಗೆ 6 ಸಾವಿರ ಕೋಟಿ ರೂ. ಅನುದಾನ ನೀಡಿ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಪ್ಯಾಕೇಜ್ ಮೊತ್ತ 10 ಕೋಟಿ ರೂ. ನಿಗದಿಪಡಿಸಲಾಗಿದೆ. 

ಅದೇ ರೀತಿ ರಾಜ್ಯದ ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೆ 3,885 ಕೋಟಿ ಅನುದಾನ ನೀಡಿ ನಗರಸಭೆ ವ್ಯಾಪ್ತಿಯಲ್ಲಿ 1 ಕೋಟಿ, ಪುರಸಭೆ ವ್ಯಾಪ್ತಿಯಲ್ಲಿ 50 ಲಕ್ಷ ಹಾಗೂ ಪಟ್ಟಣ ಪಂಚಾಯಿತಿಗಳಿಗೆ 25 ಲಕ್ಷ ರೂ. ತಾಲೂಕು ಮಟ್ಟದ ಕಾಮಗಾರಿಗಳಿಗೆ 1 ಕೋಟಿ ರೂ.ಪ್ಯಾಕೇಜ್ ಮೊತ್ತ ನಿಗದಿಪಡಿಸಲಾಗಿದೆ. ಇದರಿಂದಾಗಿ ಎಸ್ಸಿ-ಎಸ್ಟಿ ಗುತ್ತಿಗೆದಾರರು ಕಾಮಗಾರಿಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಬಿಬಿಎಂಪಿ, ನಗರಸಭೆ, ಪುರಸಭೆ ಹಾಗೂ ತಾಲೂಕು ಮಟ್ಟಕ್ಕೆ ಮೊತ್ತಕ್ಕೆ ಮಿತಿ ಹೇರಿ ಮತ್ತು ಪ್ಯಾಕೇಜ್ ನಿಗದಿಪಡಿಸಿ 2022ರ ಜ.14 ಮತ್ತು ಮೇ 11ರಂದು ಹೊರಡಿಸಿರುವ ಸುತ್ತೋಲೆಗಳನ್ನು ರದ್ದುಪಡಿಸಬೇಕು. ಟೆಂಡರ್ ಕರೆಯಲು ಹಾಗೂ ಪ್ಯಾಕೇಜ್ ಮೊತ್ತ 50 ಲಕ್ಷ ಮೀರದಂತೆ ಮಾರ್ಗಸೂಚಿ ರೂಪಿಸಲು ಸರಕಾರಕ್ಕೆ ನಿರ್ದೇಶನ ನೀಡಬೇಕು. ಯೋಜನೆಯಡಿ ಅ.4ರಂದು ಕರೆಯಲಾಗಿರುವ ಅಲ್ಪಾವಧಿ ಟೆಂಡರ್‍ಗಳನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರ ಮನವಿ ಮಾಡಿದ್ದಾರೆ. ಅಲ್ಲದೇ ಅರ್ಜಿಯು ಇತ್ಯರ್ಥವಾಗುವವರೆಗೆ ಸರಕಾರದ ಎಲ್ಲ ಸುತ್ತೋಲೆಗಳಿಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಲಾಗಿದೆ.

Similar News