ಇದುವರೆಗೂ ಒಂದು ಪೋನ್ ಮಾಡಿ ಏನಾಯ್ತು ಅಂತ ಕೇಳಿಲ್ಲ: ಗೃಹ ಸಚಿವರ ವಿರುದ್ಧ BJP ಶಾಸಕ ಎಂ.ಪಿ.ಕುಮಾರಸ್ವಾಮಿ ಅಸಮಾಧಾನ

Update: 2022-11-23 11:38 GMT

ಬೆಂಗಳೂರು, ನ. 23: ‘ನಾನೊಬ್ಬ ದಲಿತ ಶಾಸಕ ಎಂಬ ಕಾರಣದಿಂದ ಕ್ಷೇತ್ರದಲ್ಲಿ ನನ್ನ ಮೇಲೆ ನಡೆದ ಹಲ್ಲೆ ಘಟನೆ ಸಂಬಂಧ ಸೌಜನ್ಯಕ್ಕೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನನ್ನನ್ನು ಈವರೆಗೂ ಮಾತನಾಡಿಸಿಲ್ಲ. ನಾವು(ದಲಿತರು) ಹಲ್ಲೆಗೆ ಒಳಪಡುವರು ಎಂದು ಅವರು ಸುಮ್ಮನೆ ಆಗಿರಬಹುದು’ ಎಂದು ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಇಂದಿಲ್ಲಿ ಗೃಹ ಸಚಿವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆನೆಯ ದಾಳಿಗೆ ಸಿಲುಕಿ ಮೃತಪಟ್ಟ ಮಹಿಳೆಯ ಕುಟುಂಬದವರಿಗೆ ಸಾಂತ್ವಾನ ಹೇಳಲು ತೆರಳಿದ್ದೆ. ಇದು ಸಣ್ಣ ಘಟನೆಯಲ್ಲ, ಜನರು ನನಗೆ ದೊಣ್ಣೆ, ಕಲ್ಲುಗಳಿಂದ ಹೊಡೆಯಲು ಬಂದಿದ್ದರು. ಹೀಗಿರುವಾಗ ಇದು ಸಣ್ಣ ಘಟನೆ  ಆಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

‘ನಾನು ದೂರು ಕೊಡಲಿಲ್ಲ. ಕುಮಾರಸ್ವಾಮಿ ಸಾಮಾನ್ಯ ವ್ಯಕ್ತಿಯಲ್ಲ. ನಾನೊಬ್ಬ ಶಾಸಕ. ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇದುವರೆಗೂ ನನ್ನನ್ನು ಮಾತನಾಡಿಸುವ ಕೆಲಸ ಮಾಡಿಲ್ಲ. ಕನಿಷ್ಟ ಸೌಜನ್ಯಕ್ಕೂ ಕರೆದು ಏನಾಯ್ತು ಎಂದು ಕೇಳಿಲ್ಲ. ಒಬ್ಬ ಜನಪ್ರತಿನಿಧಿಗಳಿಗೆ ಹೀಗೆ ಆದರೆ ಜನರ ಪರಿಸ್ಥಿತಿ ಎಲ್ಲಿಗೆ ಹೋಗಲಿದೆ’ ಎಂದು ಅವರು ವಾಗ್ದಾಳಿ ನಡೆಸಿದರು.

‘ನಾನು ಆನೆ ಸಾಕಲು ಸಾಧ್ಯವೇ?, ಗೃಹ ಸಚಿವರು ಸಂಪೂರ್ಣವಾಗಿ ನನ್ನ ನಿರ್ಲಕ್ಷ್ಯ ಮಾಡಿದ್ದಾರೆ. ಇದುವರೆಗೂ ಒಂದು ಫೋನ್ ಮಾಡಿ ಏನಾಯಿತು ಎಂದು ಕೇಳಿಲ್ಲ. ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ಆರೋಗ್ಯದ ಬಗ್ಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಆದರೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಘಟನೆಯ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ’ ಎಂದು ಅವರು ದೂರಿದರು.

‘ನನಗೆ ಬಹಳ ತೊಂದರೆ ಆಗಿದೆ, ಕೊಲೆ ಮಾಡಲು ಬಂದವರು, ಹುಚ್ಚುನಾಯಿ ಅಟ್ಟಿಸಿಕೊಂಡು ಬಂದ ರೀತಿಯಲ್ಲಿ ಜನ ನನ್ನನ್ನು ಅಟ್ಟಿಸಿಕೊಂಡು ಬಂದರು. ನಾನು ಅಂದು ಪ್ರಾಣ ಉಳಿಸಿಕೊಂಡಿದ್ದೇ ಹೆಚ್ಚು. ಬಟ್ಟೆ ಹೋದರೆ ಹೋಯ್ತ, ಆದರೆ, ಪ್ರಾಣ ಹೋದ್ರೆ ಏನು ಗತಿ. ನನ್ನ ನೋವು ಏನೆಂದರೆ ನಾನು ನನ್ನ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆರಗ ಜ್ಞಾನೇಂದ್ರ ಅವರು ಇಲ್ಲಿಯ ವರೆಗೆ ನಾನು ಶಾಸಕ ಅಲ್ಲ, ಕನಿಷ್ಟ ನನ್ನ ಸಹೋದ್ಯೋಗಿ ಎಂದೂ ಫೋನ್ ಮಾಡಿಲ್ಲ. ಇವರು ಹೊಡೆಸಿಕೊಳ್ಳುವ ಜನರು’ ಎಂದು ಅವರ ಮನಸ್ಸಿನಲ್ಲಿರಬಹುದು’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

‘ಶಾಸಕ ಸ್ಥಾನದಲ್ಲಿದ್ದು, ಪ್ರತಿಯೊಬ್ಬರನ್ನು ರಕ್ಷಣೆ ಮಾಡುವಂತವರು ಈ ಘಟನೆಯ ಬಗ್ಗೆ ಸುಮ್ಮನೆ ಆಗಿದ್ದು ಬೇಸರವಿದೆ. ನಮಗೆ ಅಧಿಕಾರಿಗಳನ್ನು ಹಾಕಿ ಕೊಡಿ ಎಂದು ಕೇಳಿದ್ದೆ. ಒಬ್ಬ ಗೃಹ ಸಚಿವರಾಗಿ ನನ್ನ ಮಾತನಾಡಿಸಿಲ್ಲ’ ಎಂದು ದೂರಿದ ಅವರು, ‘ನಾನು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮೇಲೆ ಮಾತನಾಡಬೇಕೇ? ಎಂದು ಟೀಕಿಸಿದರು.

------------------------------------------

‘ಆನೆ ದಾಳಿ ನಡೆಯುತ್ತದೆ. ಅದನ್ನು ತಪ್ಪಿಸಲು ಕಷ್ಟಸಾಧ್ಯ. ಆದರೆ, ಕ್ಷೇತ್ರದಲ್ಲಿ ಏನಾದರೂ ಆದರೆ ಶಾಸಕರು ಸಾಂತ್ವನ ಹೇಳಲು ಹೋಗಬಾರದೇ. ಗೃಹ ಸಚಿವರ ನಡವಳಿಕೆ ಸರಿಯಿಲ್ಲ. ರಾಜ್ಯದ ಗೃಹ ಇಲಾಖೆ ಹೊಣೆ ಹೊತ್ತಿರುವವರೇ ನನ್ನ ಪ್ರಾಣ ಹೊಂದರೆ ಯಾರು ಹೊಣೆ’

-ಎಂ.ಪಿ.ಕುಮಾರಸ್ವಾಮಿ ಮೂಡಿಗೆರೆ ಬಿಜೆಪಿ ಶಾಸಕ

Similar News