ಗುರುವಾರದಿಂದ (ನ.24) ನಂದಿನಿ ಹಾಲು, ಮೊಸರಿನ ದರ 2 ರೂ. ಏರಿಕೆ

Update: 2022-11-23 16:57 GMT

ಬೆಂಗಳೂರು, ನ.23: ‘ನಂದಿನ ಹಾಲಿನ ದರ  ಪ್ರತಿ ಲೀಟರ್ ಗೆ 2ರೂ. ಮತ್ತು ಮೊಸರಿನ ಮಾರಾಟ ದರವನ್ನು ಪ್ರತಿ ಕೆ.ಜಿ.ಗೆ 2ರೂ.ನಂತೆ ಹೆಚ್ಚಳ ಮಾಡಿದ್ದು, ನಾಳೆ(ನ.24)ಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ’ ಎಂದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಂಡಳಿ ನಿಯಮಿತ(ಕೆಎಂಎಫ್) ಪ್ರಕಟಿಸಿದೆ.

ಪ್ರತಿ ಲೀಟರ್ ಗೆ 37 ರೂ.ಗಳಿದ್ದ ಟೋನ್ಡ್ ಹಾಲಿನ ದರ 39ರೂ.ಗೆ ಹೆಚ್ಚಳವಾಗಲಿದೆ. ಒಂದು ಲೀಟರ್ ಮೊಸರಿನ ದರ 45ರೂ.ಗಳಿಂದ 48 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಹೋಮೋಜಿನೈಸ್ಡ್ ಟೋನ್ಡ್ ಹಾಲು 40 ರೂ., ಹೋಮೋಜಿನೈಸ್ಡ್ ಹಸುವಿನ ಹಾಲು 44ರೂ., ಸ್ಷೆಷಲ್ ಹಾಲು 45ರೂ., ಶುಭಂ ಹಾಲು 45 ರೂ.ಗೆ, ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 46ರೂ., ಸಮೃದ್ಧಿ ಹಾಲು 50ರೂ., ಸಂತೃಪ್ತಿ ಹಾಲು 52ರೂ., ಡಬಲ್ ಟೋನ್ಡ್ ಹಾಲು 38ರೂ.ಗೆ ಏರಿಕೆ ಮಾಡಲಾಗಿದೆ.  

‘ಹೈನೋದ್ಯಮದ ಮತ್ತು ಹಾಲಿನ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆ ಆಗಿರುವುದರಿಂದ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳದ ಮತ್ತು ಎಲ್ಲ ಒಕ್ಕೂಟಗಳ ಮನವಿಯನ್ನು ಪರಿಗಣಿಸಿ ದರ ಹೆಚ್ಚಳ ಮಾಡಲಾಗಿದೆ. ಹೆಚ್ಚಳ ಮಾಡಲಾದ ದರವನ್ನು, ಉತ್ಪಾದಕ ರೈತರಿಗೆ ಪ್ರೋತ್ಸಾಹ ಧನದ ರೂಪದಲ್ಲಿ ವರ್ಗಾವಣೆ ಮಾಡಲಾಗುವುದು’ ಎಂದು ಕೆಎಂಫ್ ಸ್ಪಷ್ಟಣೆ ನೀಡಿದೆ. 

‘ಒಕ್ಕೂಟಗಳಲ್ಲಿ ಹಳೆಯ ದರ ಮುದ್ರಿತವಾಗಿರುವ ದಾಸ್ತಾನು ಇದ್ದು, ದಾಸ್ತಾನು ಮುಗಿಯುವವರೆಗೂ ಹಳೆಯ ದರ ಮುದ್ರಿತ ಪ್ಯಾಕೇಟ್‍ಗಳಲ್ಲಿ ಹಾಲು ಸರಬರಾಜು ಆಗಲಿದೆ. ಆದರೂ ನಾಳೆಯಿಂದಲೇ (ನ.24) ಪರಿಷ್ಕೃತ ದರ ಅನ್ವಯವಾಗಲಿದೆ ಎಂದು ಕೆಎಂಎಫ್‍ನ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಿಸಿದ್ದಾರೆ.  

ಲೀಟರ್ ಗೆ 2 ರೂ.ಹೆಚ್ಚಳ: ‘ನ.14ರಂದು ನಂದಿನ ಹಾಲಿನ ಹಾಗೂ ಮೊಸರಿನ ಬೆಲೆಯನ್ನು ಪ್ರತಿ ಲೀಟರ್ ಗೆ 3 ರೂ.ನಂತೆ ಹೆಚ್ಚಳ ಮಾಡುವುದಾಗಿದೆ ಕೆಎಂಎಫ್ ಆದೇಶ ಹೊರಡಿಸಿತ್ತು. ಅದರ ಬೆನ್ನಲ್ಲೆ ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ, ‘ತಮ್ಮ ಗಮನಕ್ಕೆ ತರದೆ ನಂದಿನಿ ಹಾಲಿನ ಬೆಲೆಯನ್ನು ಹೆಚ್ಚಿಸಿದ್ದಾರೆ. ಹೀಗಾಗಿ ಈ ಕುರಿತು ಸಭೆಯನ್ನು ನಡೆಸಿ ದರ ನಿರ್ಧರಿಸಲಾಗುವುದು’ ಎಂದು ಹೇಳಿ ಕೆಎಂಎಫ್ ಅಧಿಕಾರಿಗಳ ಜತೆ ಸಭೆ ನಡೆಸಿ ಗ್ರಾಹಕರಿಗೆ ಹೊರೆಯಾಗದಂತೆ ದರ ಪರಿಷ್ಕರಣೆಗೆ ಸೂಚನೆ ನೀಡಿದ್ದರು. ಇದೀಗ ಕೆಎಂಎಫ್ ಪ್ರತಿ ಲೀಟರ್ ಗೆ 3 ರೂ.ಬದಲಿಗೆ 2 ರೂ.ಗಳನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ’

ಪರಿಷ್ಕೃತ ದರ: ಟೋನ್ಡ್ ಹಾಲು -37 ರೂ.ನಿಂದ 39 ರೂ., ಹೋಮೋಜಿನೈಸ್ಡ್ ಟೋನ್ಡ್-38 ರೂ.ನಿಂದ 40 ರೂ., ಹೋಮೋಜಿನೈಸ್ಡ್ ಹಸುವಿನ ಹಾಲು-42 ರೂ.ಗಳಿಂದ 44 ರೂ.ಗಳಿಗೆ, ಸ್ಷೆಷಲ್ ಹಾಲು-43 ರೂ.ನಿಂದ 45 ರೂ.ಗಳಿಗೆ, ಶುಭಂ ಹಾಲು-43 ರೂ.ನಿಂದ 45ರೂ.ಗಳಿಗೆ, ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು-44 ರೂ.ನಿಂದ 46 ರೂ.ಗಳಿಗೆ, ಸಮೃದ್ಧಿ ಹಾಲು-48 ರೂ. ಗಳಿಂದ 50 ರೂ.ಗೆ ಹಾಗೂ ಡಬಲ್ ಟೋನ್ಡ್ ಹಾಲು ಲೀಟರ್ ಗೆ-36 ರೂ.ನಿಂದ 38 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಇದೇ ವೇಳೆ ಮೊಸರಿನ ದರ ಪ್ರತಿ ಕೆ.ಜಿ.ಗೆ 45 ರೂ.ನಿಂದ 47 ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಇತರೆ ಬ್ರಾಂಡ್‍ಗಳ ಹಾಲಿನ ದರ: ದೊಡ್ಲ ಹಾಲಿ ಪ್ರತಿ ಲೀ.ಗೆ-44 ರೂ., ಜೆರ್ಸಿ-44, ಹೆರಿಟೇಜ್-48, ತಿರುಮಲ-48, ಗೋವರ್ಧನ್-46 ಹಾಗೂ ಆರೋಕ್ಯ-50 ರೂ.ಗಳಿದ್ದು, ನಂದಿನಿ ಹಾಲಿ ದರ ಲೀ.37 ರೂ.ಗಳಿದ್ದು ಇತರೆ ರಾಜ್ಯಗಳ ಹಾಲಿನ ದರಕ್ಕೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ದರ ಇದೆ ಎಂದು ದರ ಏರಿಕೆ ಬಗ್ಗೆ ಕೆಎಂಎಫ್ ಸಮರ್ಥನೆ ನೀಡಿದೆ.

Similar News