ಚಾಮರಾಜನಗರ | ವೈದ್ಯರ ನಿರ್ಲಕ್ಷ್ಯದಿಂದ 9 ತಿಂಗಳ ಮಗು ಮೃತ್ಯು: ಆರೋಪ

ಆಸ್ಪತ್ರೆ ಎದುರು ಮಗುವಿನ ಮೃತದೇಹದೊಂದಿಗೆ ಸಾರ್ವಜನಿಕರಿಂದ ಪ್ರತಿಭಟನೆ

Update: 2022-11-23 13:41 GMT

ಚಾಮರಾಜನಗರ: ನ.23 ತಿಂಗಳ ಮಗುವಿಗೆ ಚುಚ್ಚು ಮದ್ದು ಹಾಕಿದ ಪರಿಣಾಮ ಮಗು ಮೃತಪಟ್ಟಿದೆ ಎಂದು ಆರೋಪಿಸಿ,  ಚಾಮರಾಜನಗರ ಪಟ್ಟಣದ ಜಿಲ್ಲಾಸ್ಪತ್ರೆಯ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ಎದುರು ಸಾರ್ವಜನಿಕರು ರಸ್ತೆ ತಡೆ ನಡೆಸಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಚಾಮರಾಜನಗರ ಪಟ್ಟಣದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ವೈದ್ಯಕೀಯ ಬೋಧನಾ ಅಸ್ಪತ್ರೆಯ ಅಧೀನದಲ್ಲಿರುವ ಮಹಿಳೆ ಮತ್ತು ಮಕ್ಕಳ ಆಸ್ಪತ್ರಗೆ ಬುಧವಾರ ಬೆಳಗ್ಗೆ 11 ರ ಸುಮಾರಿಗೆ ಮುರಟಿಪಾಳ್ಯ ಗ್ರಾಮದ ಶಿವರುದ್ರಮ್ಮ ಎಂಬ ಮಹಿಳೆ ತನ್ನ 9 ತಿಂಗಳ ಗಂಡು ಮಗುವಿಗೆ ಅನಾರೋಗ್ಯದ ಹಿನ್ನಲೆಯಲ್ಲಿ ಕರೆತಂದು ಪರೀಕ್ಷೆಗೆ ಒಳಪಡಿದ್ದು, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮಗುವಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಈ ವೇಳೆ ಮಗುವಿನ ಆರೋಗ್ಯ ಸುಧಾರಣೆಯಾಗದೇ ಇದ್ದಾಗ ಚುಚ್ಚು ಮದ್ದು ನೀಡಿದ್ದಾರೆ. ಮಗುವಿಗೆ ಚುಚ್ಚು ಮದ್ದು ನೀಡಿದ ಕೆಲವೇ ಹೊತ್ತಿನಲ್ಲಿ ಮಗು ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ. 

'ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆಗೆ ನೀಡಿದ್ದ ವೈದ್ಯಕೀಯ ಚೀಟಿಯನ್ನು ಪೋಷಕರಿಂದ ವಾಪಸ್ ಪಡೆದುಕೊಂಡು, ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ತಕ್ಷಣ ಮೈಸೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆಸ್ಪತ್ರೆಯ ಆಂಬುಲೆನ್ಸ್ ನೀಡದೇ ಇರುವಾಗ ಮಗುವಿನಲ್ಲಿ ಚಲನವಲನ ಇಲ್ಲದೇ ಇರುವುದನ್ನು ಗಮನಿಸಿ, ಅಕ್ಕ ಪಕ್ಕದವರಿಗೆ ವಿಷಯ ತಿಳಿಸಿರುವುದಾಗಿ' ಪೋಷಕರು ಹೇಳಿದ್ದಾರೆ. 

ಪ್ರತಿಭಟನೆ: ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಹೋರಾಟಗಾರರು ಜಮಾಯಿಸಿ ವೈದ್ಯರ ನಿರ್ಲಕ್ಷ್ಯತೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ವೈದ್ಯಕೀಯ ಬೋಧನಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೃಷ್ಣಪ್ರಸಾದ್ , ತಪ್ಪತಸ್ಥರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಹೇಳಿದರೂ ಸಹ ಪ್ರತಿಭಟನೆ ಕೈ ಬಿಡುವಲ್ಲಿ ಹೋರಾಟಗಾರರು ಮುಂದಾಗಲಿಲ್ಲ ಎಂದು ತಿಳಿದು ಬಂದಿದೆ.

ಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.  

Similar News