ಮೈಸೂರು | ಬಾಲಕಿಯ ಅತ್ಯಾಚಾರ: ಆರೋಪಿಗೆ 43 ವರ್ಷ ಜೈಲು ಶಿಕ್ಷೆ ವಿಧಿಸಿದ ಪೊಕ್ಸೊ ವಿಶೇಷ ನ್ಯಾಯಾಲಯ

Update: 2022-11-23 13:42 GMT

ಮೈಸೂರು, ನ.23: ಬಾಲಕಿಯೋರ್ವಳ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ 43 ವರ್ಷ ಜೈಲು ಶಿಕ್ಷೆ ಹಾಗೂ 55 ಸಾವಿರ ರೂ. ದಂಡ ವಿಧಿಸಿ ಮೈಸೂರಿನ ಎಫ್.ಟಿ.ಎಸ್.ಸಿ. ಪೊಕ್ಸೊ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಬಿಹಾರ ಮೂಲದ ನಾಝೀಮ್ ಎಂಬಾತನೇ 43 ವರ್ಷ ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದಾನೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಹಳೇ ಕೆಂಪಯ್ಯನ ಹುಂಡಿ ಗ್ರಾಮದಲ್ಲಿರುವ ಸಿನೆಮಾ ನಟರೊಬ್ಬರ ಫಾರಂ ನಲ್ಲಿ ಲಾಳ ಕಟ್ಟುವ ಕೆಲಸ ಮಾಡುತ್ತಿದ್ದ ನಾಝೀಮ್ ಅದೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ಒಂದು ಕುಟುಂಬಕ್ಕೆ ಸೇರಿದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದನೆಂದು ಆರೋಪಿಸಿ, ದೂರು ದಾಖಲಿಸಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆಯನ್ನು ನಡೆಸಿದ ಶೀಘ್ರ ಗತಿ ವಿಶೇಷ ನ್ಯಾಯಾಲಯ-1, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶೈಮಾ ಖದ್ರೋಚ್ ಅವರು, ಆರೋಪಿಯ ವಿರುದ್ಧ ಲೈಂಗಿಕ ಅತ್ಯಾಚಾರ, ಜೀವ ಬೆದರಿಕೆ ಮತ್ತು ಹಲ್ಲೆಯ ಆರೋಪ ಸಾಬೀತಾಗಿದೆ ಎಂದು ತಿಳಿಸಿ ಆರೋಪಿಗೆ ಪೊಕ್ಸೋ ಕಾಯಿದೆ ಅಡಿಯಲ್ಲಿ ಒಟ್ಟು 43 ವರ್ಷಗಳ ಕಠಿಣ ಶಿಕ್ಷೆ, ರೂ. 55 ಸಾವಿರ ದಂಡವನ್ನು ವಿಧಿಸಿದ್ದು, ಬಾಲಕಿಗೆ ಬೆದರಿಕೆ ಹಾಕಿದ ಅಪರಾಧಕ್ಕಾಗಿ 6 ತಿಂಗಳ ಸಾದಾ ಸಜೆ ಮತ್ತು 1 ಸಾವಿರ ರೂ. ದಂಡ, ಬಾಲಕಿಗೆ ಕೈಗಳಿಂದ ಹೊಡೆದ ಅಪರಾಧಕ್ಕಾಗಿ 1 ವರ್ಷ ಸಾದಾ ಸಜೆಯ ಶಿಕ್ಷೆ ಮತ್ತು 1 ಸಾವಿರ ರೂ. ದಂಡವನ್ನು ವಿಧಿಸಿ ಶಿಕ್ಷೆಯನ್ನು ನೀಡಿರುತ್ತಾರೆ.

ಅಲ್ಲದೇ ಆರೋಪಿಗೆ ವಿಧಿಸಿರುವ ರೂ.50 ಸಾವಿರ ರೂ. ದಂಡದ ಹಣದಲ್ಲಿ ರೂ. 25 ಸಾವಿರ ನೊಂದ ಬಾಲಕಿಗೆ ಪರಿಹಾರದ ರೂಪದಲ್ಲಿ ಪಾವತಿಸಬೇಕು ಮತ್ತು ಉಳಿದ 25 ಸಾವಿರ ರೂ. ಗಳನ್ನು ಸರ್ಕಾರಕ್ಕೆ ಜಮಾ ಮಾಡತಕ್ಕದ್ದು ಎಂದು ಆದೇಶಿಸಿದ್ದಾರೆ. ಜತೆಗೆ  ಬಾಲಕಿಯು ರೂ.7 ಲಕ್ಷ ಪರಿಹಾರಕ್ಕೆ ಅರ್ಹಳು ಎಂದು ನ್ಯಾಯಾಲಯ ಆದೇಶಿಸದೆ.

ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಬಿ. ಜಯಂತಿ ಅಭಿಯೋಗದ ಪರವಾಗಿ ಹಾಜರಾಗಿ ವಾದ ಮಂಡಿಸಿದ್ದರು.

Similar News