ಮಡಿಕೇರಿ : ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಹಿಳಾ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಟ್ಯಾಕ್ಸಿ ಕಾರಿನ ಸಬ್ಸಿಡಿ ಹಣ ಮಂಜೂರಾತಿಗೆ ಲಂಚ ಕೇಳಿದ ಆರೋಪ

Update: 2022-11-23 14:37 GMT

ಮಡಿಕೇರಿ ನ.23 : ಟ್ಯಾಕ್ಸಿ ಕಾರಿನ ಸಬ್ಸಿಡಿ ಹಣ ಮಂಜೂರಾತಿಗಾಗಿ ವ್ಯಕ್ತಿಯೊಬ್ಬರಿಂದ 10 ಸಾವಿರ ರೂ. ನಗದು ಸ್ವೀಕರಿಸುತ್ತಿದ್ದ ಸಂದರ್ಭ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಹಿಳಾ ಸಿಬ್ಬಂದಿಯೊಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 

ನಿಗಮದ ಹೊರ ಗುತ್ತಿಗೆ ಸಿಬ್ಬಂದಿ ಪ್ರಥಮ ದರ್ಜೆ ಸಹಾಯಕಿ ಹುದ್ದೆಯ ಲತಾ ಆಚಾರ್ ಎಂಬುವವರೇ ಲೋಕಾಯುಕ್ತರು ವಶಕ್ಕೆ ಪಡೆದ ಆರೋಪಿ ಎಂದು ತಿಳಿದು ಬಂದಿದೆ.

ಸೋಮವಾರಪೇಟೆ ನಿವಾಸಿ ಲತೀಫ್ ಎಂಬುವವರು ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಮೂಲಕ ಟ್ಯಾಕ್ಸಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಟ್ಯಾಕ್ಸಿಗೆ ಒಟ್ಟು 2.50 ಲಕ್ಷ ರೂ.ಗಳ ಸಬ್ಸಿಡಿ ಕೂಡ ಲಭ್ಯವಿದ್ದು, ಸಬ್ಸಿಡಿಗೆ ತಮ್ಮನ್ನು ಪರಿಗಣಿಸುವಂತೆ ಲತೀಫ್ ಅರ್ಜಿ ಮೂಲಕ ಮನವಿ ಮಾಡಿದ್ದರು. ಸಬ್ಸಿಡಿ ಹಣದ ಮಂಜೂರಾತಿ ಪಟ್ಟಿಯಲ್ಲಿ ಹೆಸರು ನಮೂದಾಗುವಂತೆ ಮಾಡಲು ಶೇ.10ರಂತೆ ಹಣ ನೀಡಬೇಕೆಂದು ಲತಾ ಆಚಾರ್ ಲತೀಫ್ ಗೆ ತಿಳಿಸಿದ್ದರು ಎಂದು ಆರೋಪಿಸಲಾಗಿದೆ. 

ಒಟ್ಟು 20 ಸಾವಿರ ರೂ.ಗಳಿಗೆ ಮಾತುಕತೆ ನಡೆದು 2 ಕಂತುಗಳಲ್ಲಿ ಹಣ ನೀಡುವಂತೆ ಲತಾ ಹೇಳಿದ್ದರಲ್ಲದೆ, ಮೊದಲ ಕಂತು 10 ಸಾವಿರ ನೀಡಿದ 3 ದಿನಗಳಲ್ಲಿ 2ನೇ ಕಂತು ನೀಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಮನನೊಂದ ಯೋಜನೆಯ ಫಲಾನುಭವಿ ಲತೀಫ್ ಕೊಡಗು ಲೋಕಾಯುಕ್ತಕ್ಕೆ ದೂರು ನೀಡಿದ್ದರು. 

ಅದರಂತೆ ಬುಧವಾರ ಮೊದಲ ಕಂತು ಹಣ 10 ಸಾವಿರ ರೂ.ಗಳನ್ನು ಸ್ವೀಕರಿಸುವ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ನಗದು ಸಹಿತ ಹೊರ ಗುತ್ತಿಗೆ ಸಿಬ್ಬಂದಿ ಲತಾ ಆಚಾರ್ ಅವರನ್ನು ವಶಕ್ಕೆ ಪಡೆದರು.

ಮಡಿಕೇರಿ ಲೋಕಾಯುಕ್ತ ವೃತ್ತನಿರೀಕ್ಷಕ ಲೋಕೇಶ್, ಮೈಸೂರು ಲೋಕಾಯುಕ್ತದ ವೃತ್ತನಿರೀಕ್ಷಕಿ ಜಯರತ್ನ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ತನಿಖೆ ನಡೆಸುತ್ತಿದ್ದಾರೆ. 
 

Similar News