SDPI ಕಚೇರಿ, ಆಸ್ತಿಗಳ ಜಪ್ತಿ ಪ್ರಕರಣ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೇರಿ ಹಲವರಿಗೆ ಹೈಕೋರ್ಟ್ ನಿಂದ ನೋಟಿಸ್

Update: 2022-11-23 15:54 GMT

ಬೆಂಗಳೂರು, ನ.23: ಎಸ್‌ಡಿಪಿಐಗೆ (Social Democratic Party of India) ಸೇರಿದ ಸ್ಥಳಗಳ ಮೇಲೆ ಅಕ್ರಮವಾಗಿ ದಾಳಿ ನಡೆಸಿ, ಆಸ್ತಿಗಳ ಜಪ್ತಿ ಹಾಗೂ ಕಚೇರಿಗಳನ್ನು ವಶಕ್ಕೆ ಪಡೆದುಕೊಂಡಿರುವುದನ್ನು ತೆರವುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೇರಿ ಹಲವರಿಗೆ ನೋಟಿಸ್ ಜಾರಿ ಮಾಡಿದೆ. 

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ದ ದಕ್ಷಿಣ ಕನ್ನಡ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಪ್ರತಿವಾದಿಗಳಾದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ.

ಜಪ್ತಿ ಮಾಡಲಾಗಿರುವ ಕಚೇರಿಗಳು ಬಾಡಿಗೆ ಸ್ಥಳಗಳಾಗಿವೆ. ಎಸ್‌ಡಿಪಿಐಗೆ ಕೆಟ್ಟ ಹೆಸರು ತರಲು ಅಕ್ರಮವಾಗಿ ಜಪ್ತಿ ಮಾಡಲಾಗಿದೆ. ಮಂಗಳೂರು ನಗರದಲ್ಲಿ ಇರುವ ಎಸ್‌ಡಿಪಿಐ ಮಾಹಿತಿ ಮತ್ತು ಸೇವಾ ಕೇಂದ್ರ, ಬಂಟ್ವಾಳ ಸೇರಿ ಹಲವು ಕಡೆಗಳಲ್ಲಿ ಇರುವ ಕಚೇರಿಗಳ ಮೇಲೆ ಅಕ್ರಮವಾಗಿ ದಾಳಿ ನಡೆಸಲಾಗಿದೆ ಹಾಗೂ ಅವುಗಳಿಗೆ ಬೀಗ ಹಾಕಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಪಿಎಫ್‌ಐ ಜತೆಗೆ ಎಸ್‌ಡಿಪಿಐ ಈವರೆಗೂ ಯಾವುದೇ ಸಂಪರ್ಕವನ್ನು ಹೊಂದಿಲ್ಲ. ಪಿಎಫ್‌ಐ ಮತ್ತು ಅದರ ಸಂಸ್ಥೆಗಳನ್ನು ನಿಷೇಧಿಸುವ ವೇಳೆಯಲ್ಲಿ ಕೇಂದ್ರ ಗೃಹ ಇಲಾಖೆ ಎಸ್‌ಡಿಪಿಐ ಹೆಸರನ್ನು ಸೇರಿಸಿಲ್ಲ. ಆದರೂ, ಎಸ್‌ಡಿಪಿಐ ಕಚೇರಿಗಳ ಸ್ವತ್ತುಗಳನ್ನು ಸರಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. 

ಎಸ್‌ಡಿಪಿಐ ಪಕ್ಷದ ಅಡಿಯಲ್ಲಿ ಚುನಾಯಿತಿ ಪ್ರತಿನಿಧಿಗಳಿದ್ದು, ಜನರ ಮನವಿಗಳನ್ನು ಆಲಿಸಲು ಅವರಿಗೆ ಕಚೇರಿಗಳ ಅವಶ್ಯಕತೆ ಇದೆ. ಇಂತಹ ದಾಳಿಗಳಿಂದ ಬಹುತ್ವದ ಹೊಂದಿರುವ ಸಮಾಜದಲ್ಲಿ ಬಿರುಕು ಮೂಡಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ>>> 'ಟಿಪ್ಪು‌ ನಿಜ ಕನಸುಗಳು' ಕೃತಿ ಮಾರಾಟಕ್ಕೆ ನಿರ್ಬಂಧ ವಿಧಿಸಿದ ಕೋರ್ಟ್‌

Similar News